ತಲುಪದ ಔಷಧ ಕಿಟ್ | ಮಹಾನಗರಪಾಲಿಕೆ ಎಡವಟ್ಟು Saaksha Tv
ಹುಬ್ಬಳ್ಳಿ: ಕೊರೊನಾ ಸೋಂಕಿಗೆ ತುತ್ತಾಗಿ ಲಘು ರೋಗ ಲಕ್ಷಣಗಳಿದ್ದರೆ ಹೋಂ ಐಸೊಲೇಷನ್ ಮಾಡಲಾಗುತ್ತಿದ್ದು, ಇವರ ಮನೆಬಾಗಿಲಿಗೆ ಔಷಧದ ಕಿಟ್ ಸರಿಯಾಗಿ ವಿತರಣೆಯಾಗದೆ ಬಾಧಿತರು ಪರದಾಡುವಂತಾಗಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ಹೋಂ ಐಸೋಲೇಷನ್ ಕೊರೊನಾ ಸೋಂಕಿತರಿಗೆ ಮಹಾನಗರಪಾಲಿಕೆ ಸರಿಯಾಗಿ ಔಷಧದ ಕಿಟ್ ನೀಡುತ್ತಿಲ್ಲ ಎಂದು ದೂರುಗಳು ಕೇಳಿ ಬರುತ್ತಿವೆ. ಆರೋಗ್ಯ ಇಲಾಖೆಯು ಜನವರಿ 19 ರಿಂದ ಫೆಬ್ರವರಿ 2ರ ವರೆಗೆ ಪಾಲಿಕೆಗೆ 5,779 ಕಿಟ್ ನೀಡಿದೆ. ಪಾಲಿಕೆಯು 3,149 ಜನರ ಮನೆ ಬಾಗಿಲಿಗೆ ಕಿಟ್ ತಲುಪಿಸಿದೆ. ಉಳಿದ 2,630 ಕಿಟ ವಿತರಣೆಯಾಗಿಲ್ಲ. ನಿತ್ಯ ಅರ್ಧದಷ್ಟು ಜನರಿಗೆ ಮಾತ್ರ ಕಿಟ್ ವಿತರಣೆಯಾಗುತ್ತಿದೆ. ಉಳಿದವರಿಗೆ ಮರುದಿನವೂ ನೀಡುವ ವ್ಯವಸ್ಥೆಯಾಗಿಲ್ಲ ಎಂದು ದೂರುಗಳು ಬಂದಿವೆ.
ಮಹಾನಗರ ಪಾಲಿಕೆ ಔಷಧಿಗಳನ್ನು ನೀಡಲಂದೇ ತಿಂಗಳ ಬಾಡಿಗೆ ಆಧಾರದ ಮೇಲೆ 30 ಕಾರುಗಳನ್ನು ಬಾಡಿಗೆಗೆ ತೆಗೆದುಕೊಂಡಿದೆ. ತಿಂಗಳಲ್ಲಿ 2,500 ಕಿ.ಮೀ ಸಂಚರಿಸುವ ಷರತ್ತಿನೊಂದಿಗೆ ಜಿಎಸ್ ಟಿ ಸಮೇತ 29 ಸಾವಿರ ಪಾವತಿಸಲಾಗುತ್ತಿದೆ. ಆದರೂ ಬಾಧಿತರ ಮನೆಗೆ ಕಿಟ್ ಗಳನ್ನು ಸರಿಯಾಗಿ ತಲುಪಿಸುವ ಕೆಲಸ ಆಗುತ್ತಿಲ್ಲ ಎಂದು ಕೊರೊನಾ ಬಾಧಿತರು ನೀಡುತ್ತಿದ್ದಾರೆ.
ಕೊರೊನಾ ವರದಿ ಬಂದ ದಿನದಿಂದ ಹೋಂ ಐಸೋಲೇಷನ್ ನಲ್ಲಿದ್ದೇನೆ. ವರದಿ ಬಂದ ಮರು ದಿನ ಕರೆ ಮಾಡಿ ಔಷಧದ ಕಿಟ್ ತಲುಪಿಸುವುದಾಗಿ ಹೇಳಿದ್ದರು. ಸಣ್ಣ ಪ್ರಮಾಣದ ಲಕ್ಷಣಗಳಿದ್ದರಿಂದ ತಂದುಕೊಡಬಹುದು ಎಂದು ಕಾಯುತ್ತಲೇ ಇದ್ದೆ. ಎರಡೂ ದಿನಗಳಾದರೂ ತಂದುಕೊಡಲಿಲ್ಲ. ಮತ್ತೆ ಪೋನ್ ಮಾಡಿದಾಗಲೂ ಬರುವುದಾಗಿ ಹೇಳಿದರು. ಕೊನೆಗೆ ಸ್ನೇಹಿತರ ನೆರವಿನಿಂದ ಔಷಧ ತರಿಸಿಕೊಂಡೆ. ಕೊನೆಗೂ ಔಷಧದ ಕಿಟ್ ಕೊಡಲೇ ಇಲ್ಲ ಎಂದು ಕೊರೊನಾ ಬಾಧಿತ ವ್ಯಕ್ತಿಯೊಬ್ಬರು ತಮ್ಮ ಅನುಭವ ಹಂಚಿಕೊಂಡರು.