150 ದಿನ ವಿರಹ ವೇದನೆಯಲ್ಲಿರಬೇಕಾಗುತ್ತೆ ಟೀಮ್ ಇಂಡಿಯಾ ಆಟಗಾರರು..!
ಟೀಮ್ ಇಂಡಿಯಾ ಆಟಗಾರರು ತಮ್ಮ ಪತ್ನಿ, ಕುಟುಂಬದ ಸದಸ್ಯರಿಂದ ಸುಮಾರು 150 ದಿನ ದೂರ ಇರಲೇಬೇಕು… ? ಹಾಗಂತ ಇದು ಯಾವುದೇ ಶಿಕ್ಷೆ ಅಲ್ಲ. ಬದಲಾಗಿ ಇದು ಕೊರೋನಾ ಸೋಂಕಿನ ಎಫೆಕ್ಟ್. ಕಳೆದ ನಾಲ್ಕೈದು ತಿಂಗಳುಗಳಿಂದ ಕುಟುಂಬದ ಜೊತೆ ಹಾಯಾಗಿ ಕಾಲ ಕಳೆದಿರುವಂತಹ ಕ್ರಿಕೆಟಿಗರು ಮುಂದಿನ ಐದು ತಿಂಗಳು ವಿರಹ ವೇದನೆಯಲ್ಲಿರಬೇಕಾಗುತ್ತದೆ.
ಆಗಸ್ಟ್ ನಲ್ಲಿ ದುಬೈಗೆ ಪ್ರಯಾಣ ನಡೆಸಲಿರುವ ಟೀಮ್ ಇಂಡಿಯಾ ಆಟಗಾರರು ಮತ್ತೆ ತವರಿಗೆ ಆಗಮಿಸುವುದು ಜನವರಿ ಕೊನೆಯ ವಾರದಲ್ಲಿ. ಅಲ್ಲಿಯ ತನಕ ಬಿಡುವಿಲ್ಲದ ಕ್ರಿಕೆಟ್ ಆಟದಲ್ಲಿ ಆಟಗಾರರು ಭಾಗಿಯಾಗಲಿದ್ದಾರೆ. ಐಪಿಎಲ್, ಆಸ್ಟ್ರೇಲಿಯಾ – ಭಾರತ ಟೆಸ್ಟ್ ಸರಣಿ, ಆಸ್ಟ್ರೇಲಿಯಾ – ಭಾರತ ಏಕದಿನ ಸರಣಿ ಹಾಗೂ ಆಸ್ಟ್ರೇಲಿಯಾ-ಭಾರತ ಟಿ-ಟ್ವೆಂಟಿ ಸರಣಿ ನಡೆಯಲಿದೆ.
ಸಾಮಾನ್ಯವಾಗಿ ಕ್ರಿಕೆಟ್ ಪ್ರವಾಸ ಮಾಡುವಾಗ ಕ್ರಿಕೆಟಿಗರ ಜೊತೆ ಅವರ ಪತ್ನಿ, ಮಕ್ಕಳು ಮತ್ತು ಕುಟುಂಬದ ಸದಸ್ಯರು ಆಟಗಾರರ ಜೊತೆಗಿರುತ್ತಾರೆ. ಅದು ಐಪಿಎಲ್ ನಲ್ಲಿ ಯಾವುದೇ ಕಟ್ಟುಪಾಡುಗಳು ಇರುತ್ತಿರಲಿಲ್ಲ. ಆದ್ರೆ ಈಗ ಕೋವಿಡ್-19 ಸೋಂಕಿನಿಂದಾಗಿ ಆಟಗಾರರು ಜೈವಿಕ ಸುರಕ್ಷೆತೆಯಲ್ಲಿ ಆಡುತ್ತಿದ್ದಾರೆ. ಹೀಗಾಗಿ ಆಟಗಾರರ ಜೊತೆ ಯಾರಿಗೂ ಸಂಪರ್ಕ ಬೆಳೆಸಲು ಸಾಧ್ಯವಿಲ್ಲ. ಈ ನಡುವೆ ಐಪಿಎಲ್ ಟೂರ್ನಿಯಲ್ಲಿ ಈ ನಿರ್ಧಾರವನ್ನು ಫ್ರಾಂಚೈಸಿಗಳಿಗೆ ವಹಿಸಲಾಗಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ಐಪಿಎಲ್ ಟೂರ್ನಿ ನಡೆಯುವುದು ಬಹುತೇಕ ಖಚಿತವಾಗಿದೆ. ಆಗಸ್ಟ್ 2ರಂದು ಅಂತಿಮ ರೂಪುರೇಷೆ ಸಿಗಲಿದೆ. ಐಪಿಎಲ್ ಟೂರ್ನಿ ಒಟ್ಟು 53 ದಿನಗಳ ಕಾಲ ನಡೆಯಲಿದೆ. ಹಾಗೇ ಬಹುತೇಕ ಫ್ರಾಂಚೈಸಿಗಳು ಆಗಸ್ಟ್ ಮೊದಲ ವಾರ ಅಥವಾ ಎರಡನೇ ವಾರ ದುಬೈಗೆ ಪ್ರಯಾಣ ಮಾಡಲಿದೆ.
ಇನ್ನು ನವೆಂಬರ್ 12ರಿಂದ ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾಗೆ ತೆರಳಲಿದ್ದಾರೆ. ಅಲ್ಲಿ ಕೋವಿಡ್ ಶಿಷ್ಟಚಾರದಂತೆ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ. ಡಿಸೆಂಬರ್ 3ರಿಂದ ಜನವರಿ ಏಳರವರೆಗೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಹಾಗೇ ಜನವರಿ 12ರಿಂದ 17ರವರೆಗೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಇನ್ನು ಅಕ್ಟೋಬರ್ ನಲ್ಲಿ ನಡೆಯಬೇಕಿದ್ದ ಮೂರು ಟಿ-ಟ್ವೆಂಟಿ ಪಂದ್ಯಗಳ ಸರಣಿಯೂ ಇದೇ ವೇಳೆ ನಡೆಯುವ ಸಾಧ್ಯತೆ ಇದೆ.