ಲವ್ ಜಿಹಾದ್ ಹಿಂದೂ ಯುವಕ ಯುವತಿಯರನ್ನ ದಿಕ್ಕು ತಪ್ಪಿಸುತ್ತಿರುವ ಭೂತ : ಚಿದಂಬರಂ
ಲವ್ ಜಿಹಾದ್ ಮೂಲಕ ಬಲವಂತವಾಗಿ ಯುವತಿಯರನ್ನ ಮತಾಂತರ ಮಾಡುತ್ತಿರುವುದನ್ನ ತಡೆಯಲು ಹಲವು ರಾಜ್ಯಗಳು ಕ್ರಮ ಕೈಗೊಳ್ತಿವೆ. ಆದ್ರೆ ಈ ಬಗ್ಗೆ ಕಾಂಗ್ರೆಸ್ ನಾಯಕ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಪ್ರತಿಕ್ರಿಯಿಸಿ ಲವ್ ಜಿಹಾದ್, ನಾರ್ಕೊಟಿಕ್ ಜಿಹಾದ್ ಎಂಬುದು ಹಿಂದೂ ಯುವಕ, ಯುವತಿಯರನ್ನು ತೀವ್ರಗಾಮಿಗಳನ್ನಾಗಿಸುವುದಕ್ಕೆ ಸೃಷ್ಟಿಸಿರುವ ಒಂದು ಭೂತ. ಯುವಕ ಯುವತಿಯರ ದಿಕ್ಕುತಪ್ಪಿಸುವ ತಂತ್ರ. ಜಾತ್ಯತೀತ ರಾಷ್ಟ್ರ ಇಂತಹ ಮತಾಂಧತೆಯನ್ನು ಮೆಟ್ಟಿ ನಿಲ್ಲಬೇಕು ಎಂದು ಕಿಡಿಕಾರಿದ್ದಾರೆ.
ಕೆಲದಿನಗಳ ಹಿಂದೆ ನಾರ್ಕೊಟಿಕ್ ಜಿಹಾದ್ ಬಗ್ಗೆ ಕೇರಳದಲ್ಲಿನ ಕ್ಯಾಥೋಲಿಕ್ ಬಿಷಪ್ ಜೋಸೆಫ್ ಕಲ್ಲರಂಗತ್ ಅವರ ಹೇಳಿಕೆಗೆ ತೀವ್ರ ಆಕ್ಷೇಪವೆತ್ತಿರುವ ಚಿದಂಬರಂ, ನಾರ್ಕೊಟಿಕ್ ಜಿಹಾದ್ ಬಗ್ಗೆ ಬಿಷಪ್ ಹೇಳಿಕೆಯನ್ನು ಗಮನಿಸಿದರೆ ಅದು ವಿಕೃತ ಚಿಂತನೆಯಾಗಿದ್ದು, ಈ ಹೇಳಿಕೆ ಧರ್ಮಗಳ ನಡುವೆ ಒಡಕು ಸೃಷ್ಟಿಸಿ ಕೋಮು ಸಮರವನ್ನುಂಟುಮಾಡುವ ಉದ್ದೇಶವಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನೂ ಬಿಷಪ್ ಆಗಿ ದೀಕ್ಷೆ ಪಡೆದಿರುವ ಜೋಸೆಫ್ ಅವರು ಈ ರೀತಿ ಮಾತನಾಡಿರುವುದು ಸ್ವತಃ ನನಗೆ ಮತ್ತು ನನ್ನಂತಹ ಅನೇಕ ಮಂದಿಗೆ ನೋವುಂಟುಮಾಡಿದೆ. ಭಾರತದಲ್ಲಿ ಇಸ್ಲಾಮ್ ವಿಸ್ತರಣೆಯಾಗುತ್ತಿದೆ ಎಂಬುದಕ್ಕೆ ಯಾವುದೇ ಸಾಕ್ಷಿಯಿಲ್ಲ. ಇಸ್ಲಾಮ್‍ಗೆ ಜನ ಸಾಮೂಹಿಕ ಮತಾಂತರಗೊಳ್ಳುತ್ತಿರುವುದು ಸುಳ್ಳು ಎಂದಿದ್ದಾರೆ. ಅಲ್ಲದೇ ಜೋಸೆಫ್ ಕಲ್ಲರಂಗತ್, ಲವ್ ಜಿಹಾದ್ ಹಾಗೂ ನಾರ್ಕೋಟಿಕ್ ಜಿಹಾದ್ ಮೂಲಕ ಯುವಕ ಯುವತಿಯರ ದಿಕ್ಕುತಪ್ಪಿಸಲಾಗ್ತಿದೆ. ಅವರನ್ನ ತಪ್ಪುದಾರಿಗೆ ಎಳೆದೊಯ್ಯಲಾಗ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.