ಬೆಂಗಳೂರು: ಭತ್ತದ ಖರೀದಿ ಕೇಂದ್ರಗಳನ್ನು ತೆರೆಯದಿರುವುದಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ (Ashok) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ (Congress) ಸರ್ಕಾರ ದರಿದ್ರ ಸರ್ಕಾರ ಅಂತ ವಾಗ್ದಾಳಿ ನಡೆಸಿದ್ದಾರೆ. ಈ ದರಿದ್ರ ಕಾಂಗ್ರೆಸ್ ಸರ್ಕಾರದಲ್ಲಿ ಒಬ್ಬರು ಕುರ್ಚಿ ಉಳಿಸಿಕೊಳ್ಳಲು ತಂತ್ರ ಹೆಣೆಯುತ್ತಿದ್ದರೆ, ಇನ್ನೊಬ್ಬರು ಕುರ್ಚಿ ಕಿತ್ತುಕೊಳ್ಳಲು ಕತ್ತಿ ಮಸಿಯುತ್ತಿದ್ದಾರೆ. ಇವರಿಬ್ಬರ ನಡುವೆ ಆತಂತ್ರವಾಗಿರುವ ಮಂತ್ರಿಗಳು ಅವರವರ ಅಸ್ತಿತ್ವ ಉಳಿಸಿಕೊಳ್ಳಲು ಡಿನ್ನರ್ ಮೀಟಿಂಗ್, ಸೀಕ್ರೆಟ್ ಸಭೆ ಮಾಡಿ ಕಾಲಹರಣ ಮಾಡುತ್ತಿದ್ದಾರೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಇವೆಲ್ಲದರ ಮಧ್ಯೆ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ರೈತರ ಕಷ್ಟ ಕೇಳಲು ಸರ್ಕಾರವೇ ಇಲ್ಲದಂತಾಗಿದೆ ಎಂದು ಗುಡುಗಿದ್ದಾರೆ.
ಮಂಡ್ಯದಲ್ಲಿ ಭತ್ತ ಖರೀದಿ ಕೇಂದ್ರಗಳು ಆರಂಭವಾಗದ ಕಾರಣ ರೈತರು ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಭತ್ತದ ದಲ್ಲಾಳಿಗಳಿಗೆ ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಕ್ವಿಂಟಾಲ್ ಭತ್ತಕ್ಕೆ 3 ಸಾವಿರ ರೂ. ಬೆಂಬಲ ಬೆಲೆ ನಿಗದಿಯಾಗಿದ್ದರೂ ಸರ್ಕಾರ ಭತ್ತ ಖರೀದಿ ಕೇಂದ್ರಗಳು ತೆರೆಯದ ಕಾರಣ ದಲ್ಲಾಳಿಗಳಿಗೆ 1,800 ರೂ. – 2,000 ರೂ. ಮಾರಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.








