ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹಲವು ಸಾಧಕರಿಗೆ ಪದ್ಮ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಿದರು.
ಹಿರಿಯ ನಟಿ ವೈಜಯಂತಿಮಾಲಾ, ನಟ ಚಿರಂಜೀವಿ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶೆ ದಿವಂಗತ ಎಂ. ಫಾತಿಮಾ ಬೀವಿ, ಬಾಂಬೆ ಸಮಾಚಾರ್ ಮಾಲೀಕ ಹೊರ್ಮುಸ್ಜಿ ಎನ್ ಕಾಮಾ ಸೇರಿದಂತೆ 39 ಜನ ಸಾಧಕರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಉಪರಾಷ್ಟ್ರಪತಿ ಜಗದೀಪ್ ಧಂಖರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಪದ್ಮ ಪ್ರಶಸ್ತಿಗಳು 3 ವಿಭಾಗದಲ್ಲಿ ನೀಡಲಾಗುತ್ತದೆ. ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಅವು. ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ಪದ್ಮವಿಭೂಷಣ, ಉನ್ನತ ಶ್ರೇಣಿಯ ವಿಶಿಷ್ಟ ಸೇವೆಗಾಗಿ ಪದ್ಮಭೂಷಣ ಮತ್ತು ಯಾವುದೇ ಕ್ಷೇತ್ರದಲ್ಲಿನ ವಿಶಿಷ್ಟ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತದೆ.