ವೀಸಾ ಮತ್ತು ಆಟಗಾರರ ಸುರಕ್ಷತೆ ಬಗ್ಗೆ ಭಾರತ ಲಿಖಿತ ಭರವಸೆ ನೀಡದಿದ್ದರೆ ಟಿ 20 ವಿಶ್ವಕಪ್ ಸ್ಥಳಾಂತರಗೊಳಿಸಿ – ಪಾಕಿಸ್ತಾನ ಬೆದರಿಕೆ
ಕರಾಚಿ, ಫೆಬ್ರವರಿ21: ಈ ವರ್ಷದ ನವೆಂಬರ್ ನಲ್ಲಿ ನಡೆಯಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಆತಿಥ್ಯವನ್ನು ವಹಿಸಲಿರುವ ಭಾರತವು ತನ್ನ ಆಟಗಾರರಿಗೆ ವೀಸಾ ನೀಡುವ ಬಗ್ಗೆ ಮತ್ತು ಅವರ ಸುರಕ್ಷತೆಗೆ ಸಂಬಂಧಿಸಿದಂತೆ ಲಿಖಿತ ಭರವಸೆ ನೀಡದಿದ್ದರೆ ಟಿ 20 ವಿಶ್ವಕಪ್ ಅನ್ನು ಭಾರತದ ಹೊರಗೆ ಸ್ಥಳಾಂತರಿಸುವಂತೆ ಐಸಿಸಿಯನ್ನು ಕೇಳಿಕೊಳ್ಳುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿದೆ.
ಮುಂಬರುವ ಟಿ 20 ವಿಶ್ವಕಪ್ ಅನ್ನು ಮೊದಲು ಆಸ್ಟ್ರೇಲಿಯಾದಲ್ಲಿ ನಡೆಸಲು ನಿರ್ಧರಿಸಲಾಗಿತ್ತು ಆದರೆ ಸಾಂಕ್ರಾಮಿಕದಿಂದಾಗಿ, 2021 ರ ಟೂರ್ನಿಯನ್ನು ಆಯೋಜಿಸಲು ಭಾರತಕ್ಕೆ ಆತಿಥ್ಯ ನೀಡಲು ನಿರ್ಧರಿಸಲಾಯಿತು. 2022ರ ಟೂರ್ನಿಯನ್ನು ಆಯೋಜಿಸಲು ಆಸ್ಟ್ರೇಲಿಯಾವನ್ನು ಕೇಳಲಾಗಿದೆ.
ನಾವು (ಭಾರತದಲ್ಲಿ) ಆಡಲು ಸಾಧ್ಯವಿಲ್ಲ ಎಂದು ನಮ್ಮ ಸರ್ಕಾರ ಎಂದೂ ಹೇಳಿಲ್ಲ ಎಂದು ಮಣಿ ಲಾಹೋರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು. ನಾವು ಭಾಗವಹಿಸಲಿದ್ದೇವೆ ಎಂದು ಐಸಿಸಿಯೊಂದಿಗೆ ಒಪ್ಪಿಕೊಂಡಿದ್ದೇವೆ. ಐಸಿಸಿ ಮಟ್ಟದಲ್ಲಿ, ನಮ್ಮ ತಂಡಕ್ಕೆ ಮಾತ್ರವಲ್ಲ ಪಾಕಿಸ್ತಾನದಿಂದ ಪ್ರಯಾಣಿಸುವ ಅಭಿಮಾನಿಗಳಿಗೆ , ಪತ್ರಕರ್ತರಿಗೆ ಮತ್ತು ಮಂಡಳಿಯ ಅಧಿಕಾರಿಗಳಿಗೆ ಕೂಡ ವೀಸಾಗಳು ಬೇಕು. ಈ ಬಗ್ಗೆ ಭಾರತ ಸರ್ಕಾರದಿಂದ ಲಿಖಿತ ಭರವಸೆ ಬೇಕು ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಅದೆಲ್ಲವನ್ನೂ ಐಸಿಸಿ ಆತಿಥೇಯ ಒಪ್ಪಂದದಲ್ಲಿ ಬರೆಯಲಾಗಿದೆ ಮತ್ತು ಅದರ ಪ್ರಕಾರ ನಾವು ನಮ್ಮ ಬೇಡಿಕೆಯನ್ನು ಹಾಕಿದ್ದೇವೆ.
ಡಿಸೆಂಬರ್ 31, 2020 ರೊಳಗೆ ಇದನ್ನು ಮಾಡಲಾಗುವುದು ಎಂದು ಅವರು ಹೇಳಿದ್ದರು. ಆದರೆ ಅದು ಆಗಲಿಲ್ಲ. ನಾವು ಅದನ್ನು ಮತ್ತೆ ಜನವರಿಯಲ್ಲಿ ಮತ್ತು ಫೆಬ್ರವರಿಯಲ್ಲಿ ಐಸಿಸಿ ಅಧ್ಯಕ್ಷರೊಂದಿಗೆ ಮಾತನಾಡಿದ್ದೇವೆ ಮತ್ತು ಮಾರ್ಚ್ ವೇಳೆಗೆ ನನಗೆ ಸ್ಪಷ್ಟ ನಿರ್ಧಾರ ಬೇಕು ಎಂದು ನಾನು ಅವರಿಗೆ ಹೇಳಿದೆ. ಮಾರ್ಚ್ ಅಂತ್ಯದ ವೇಳೆಗೆ ಭಾರತ ಸರ್ಕಾರ ನಮಗೆ ವೀಸಾ ನೀಡಬೇಕು. ಅದು ಬರದಿದ್ದರೆ, ಈವೆಂಟ್ ಅನ್ನು ಭಾರತದಿಂದ ಯುಎಇಗೆ ಸ್ಥಳಾಂತರಿಸಲು ನಾನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದರು.