ಪಾಕಿಸ್ತಾನ ಉತ್ತಮ ಮತ್ತು ಶಕ್ತಿಯುತ ತಂಡ : ವಿರಾಟ್
ದುಬೈ : ಪಾಕಿಸ್ತಾನ ಉತ್ತಮ ತಂಡ. ಶಕ್ತಿಯುತ ತಂಡ. ಪಾಕಿಸ್ತಾನ ತಂಡವನ್ನು ಹಗುರವಾಗಿ ಪರಿಗಣಿಸಿಲ್ಲ ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ನಾಳೆ ಟಿ-20 ವಿಶ್ವಕಪ್ ಸಂಗ್ರಾಮದಲ್ಲಿ ಬದ್ಧವೈರಿಗಳ ಕಾಳಗ ನಡೆಯಲಿದೆ. ಇಂಡಿಯಾ ವರ್ಸಸ್ ಪಾಕಿಸ್ತಾನ ಪಂದ್ಯ ವಿಶ್ವಕಪ್ ನ ಫೈನಲ್ ಮ್ಯಾಚ್ಗಿಂತಲೂ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಅಭಿಮಾನಿಗಳಿಗೆ ಫೈನಲ್ ಪಂದ್ಯ ಸೋತರೂ ಹೆಚ್ಚು ನೋವಾಗುವುದಿಲ್ಲ, ಆದರೆ ಇಂಡೋ-ಪಾಕ್ ಪಂದ್ಯದ ಸೋಲನ್ನು ಅರಗಿಸಿಕೊಳ್ಳಲು ಆಗುವುದಿಲ್ಲ.
ಭಾರತವಂತೂ ಟಿ20 ವಿಶ್ವಕಪ್ ನಲ್ಲಿ ಪಾಕ್ ತಂಡವನ್ನು 5 ಬಾರಿ ಮಣಿಸಿದೆ. ಈಗ 5ನೇ ಬಾರಿಯೂ ಅಜೇಯ ದಾಖಲೆಯನ್ನು ಮುಂದುವರೆಸುವ ಕನಸು ಕಾಣುತ್ತಿದೆ.
ಇನ್ನೊಂದೆಡೆ ಪಾಕ್ ತಂಡವೂ ಅಷ್ಟೇ.. ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಗೆಲುವಿಲ್ಲದ ದಾಖಲೆಯನ್ನು ಅಳಿಸುವ ಪ್ರಯತ್ನ ಮಾಡಲು ಸಿದ್ಧವಾಗಿದೆ.
ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ಕಡುಬದ್ಧವೈರಿಗಳ ನಡುವಿನ ಕದನ ನಡೆಯಲಿದೆ. ಇಡೀ ವಿಶ್ವದ ಕಣ್ಣು ಈ ಪಂದ್ಯದ ಮೇಲಿದೆ.
ಇನ್ನು ಮೊದಲ ಪಂದ್ಯದ ಬಗ್ಗೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನ ಉತ್ತಮ ತಂಡ. ಶಕ್ತಿಯುತ ತಂಡ. ಪಾಕಿಸ್ತಾನ ತಂಡವನ್ನು ಹಗುರವಾಗಿ ಪರಿಗಣಿಸಿಲ್ಲ. ಇತರ ತಂಡಗಳ ವಿರುದ್ಧ ಆಡುವಂತೆ ಪಾಕ್ ವಿರುದ್ಧವೂ ಆಟ ಆಡುತ್ತೇವೆ ಎಂದಿದ್ದಾರೆ.
ಒಟ್ಟಾರೆ ನಾಳೆಯ ಇಂಡೋ ಪಾಕ್ ಪಂದ್ಯಕ್ಕಾಗಿ ಇಡೀ ಜಗತ್ತೇ ಕಾದಿದ್ದು, ಎರಡೂ ದೇಶಗಳ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯವನ್ನು ಯುದ್ಧದಂತೆ ನೋಡುತ್ತಿದ್ದಾರೆ.