ದೇಶಕ್ಕೆಲ್ಲಾ ಚಿನ್ನ ಸರಬರಾಜು ಮಾಡಿದ ಕೆಜಿಎಫ್ ತನ್ನ ಕಾರ್ಯವನ್ನು ನಿಲ್ಲಿಸಿ 20 ವರ್ಷಗಳೇ ಕಳೆದಿವೆ. ಸದ್ಯ ಈಗ ಗಣಿ ಪುನರಾರಂಭದ ಮಾತುಗಳು ಕೇಳಿ ಬರುತ್ತಿವೆ. ಆದರೆ ಗಣಿಗಾರಿಕೆಯಿಂದ ನಷ್ಟ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮದ್ಯೆ ಪಲ್ಲಾಡಿಯಮ್ ಎನ್ನುವುದು ಒಂದು ಅಪರೂಪದ ಲೋಹ ವಸ್ತು ಕೆಜಿಎಫದ ಭಾಗದಲ್ಲಿ ಕಂಡು ಬಂದಿದೆ.
ಇದು ಪ್ಲಾಟಿನಮ್ ಲೋಹಗಳ ಗುಂಪಿಗೆ ಸೇರು ಲೋಹ. ಮೃದುವಾಗಿದ್ದು ಮತ್ತು ಹೊಳಪುಳ್ಳ ಬಿಳಿ ಬಣ್ಣದ ಲೋಹವನ್ನು ಪ್ಲಾಟಿನಮ್ ಬದಲಿಗೆ ಹಲವಾರು ವಸ್ತುಗಳಲ್ಲಿ ಇದರ ಬಳಕೆಯಾಗುತ್ತದೆ. ಕೆಜಿಎಫ್ ನ ಸೈನೆಡ್ ಗುಡ್ಡದಲ್ಲಿ ಸಾವಿರಾರು ಕೋಟಿ ಮೌಲ್ಯದ ಚಿನ್ನದ ಅದಿರಿದ್ದು, ಈ ಕುರಿತು ಪುನಃ ಗಣಿಗಾರಿಕೆ ಆರಂಭಿಸಲು ಸರ್ಕಾರಕ್ಕೆ ಕೆಲ ಖಾಸಗಿ ಕಂಪನಿಗಳು ತಾಮುಂದು ನೀಮುಂದು ಎಂದು ಅನುಮತಿಗೆ ಮನವಿ ಸಲ್ಲಿಸಿವೆ.
ಆದರೆ ಇತ್ತೀಚೆಗೆ ಗಣಿಗಾರಿಕೆಯನ್ನು ಪುನರ್ ಆರಂಭಿಸುವ ಸಲುವಾಗಿ ಗಣಿ ಮತ್ತು ಕಲ್ಲಿದ್ದಲು ಇಲಾಖೆಯಿಂದ ಚಿನ್ನದ ಗಣಿಯಲ್ಲಿ ತಜ್ಞರಿಂದ ಪರಿಶೀಲನೆ ಸಹ ನಡೆಸಲಾಗಿದೆ. ಇದೀಗ ಚಿನ್ನಕ್ಕಿಂತಲೂ ಅಪರೂಪ ಎನ್ನುವ ಪಲ್ಲಾಡಿಯಮ್ ಲೋಹ ಅದಿರು ಗುಡ್ಡದಲ್ಲಿ ಹಾಗೂ ಗಣಿಯಲ್ಲಿ ಪತ್ತೆಯಾಗಿದೆ. ಈ ಲೋಹ ದುಬಾರಿಯಾಗಿದ್ದು ಇದಕ್ಕೆ ಚಿನ್ನಕ್ಕಿಂತಲು ನಾಲ್ಕು ಪಟ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಖುದ್ದು ಈ ಮಾಹಿತಿಯನ್ನು ಕೋಲಾರ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ಹೊರಹಾಕಿದ್ದು, ಕೋಲಾರ ಜಿಲ್ಲೆಯ ಪಾಲಿಗೆ ಇದೊಂದು ಶುಭಸುದ್ದಿ ಹಾಗೂ ಮುಂದಿನ ದಿನಗಳಲ್ಲಿ ಕೆಜಿಎಫ್ ಮಹತ್ವ ಮತ್ತಷ್ಟು ಹೆಚ್ಚಲಿದೆ ಎಂದಿದ್ದಾರೆ. ಕೇಂದ್ರ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಮಾತನಾಡುವ ವೇಳೆ ಈ ವಿಚಾರವನ್ನು ಮುನಿಸ್ವಾಮಿ ಅವರು ಬಹಿರಂಗಪಡಿಸಿದ್ದಾರೆ. ಕೇಂದ್ರದ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ ಅವರು ಒಂದು ತಂಡವನ್ನು ಕಳಿಸಿ ಚಿನ್ನದ ಗಣಿಯಲ್ಲಿ ತಪಾಸಣೆ ನಡೆಸಿದ್ದಾರೆ. ಇದರಲ್ಲಿ ಚಿನ್ನಕ್ಕಿಂತ ಹೆಚ್ಚಿಗೆ ಪಲ್ಲಾಡಿಯಮ್ ಎನ್ನುವ ಅಪರೂಪದ ಬೆಳ್ಳಿ ಲೋಹದ ಅದಿರು ಪತ್ತೆಯಾಗಿದೆ.
ಹೀಗಾಗಿ ಇದರ ಲಭ್ಯತೆಯನ್ನು ಪತ್ತೆಹಚ್ಚಲು ಎರಡನೇ ಬಾರಿಗೆ ಪ್ರಯೋಗಾಲಯಕ್ಕೆ ಕೆಜಿಎಫ್ ಗಣಿಯ ಮಣ್ಣನ್ನು ಕಳಿಸಿರುವುದಾಗಿ ಸಂಸದ ಎಸ್ ಮುನಿಸ್ವಾಮಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಬಹುತೇಕ ಗಣಿಗಾರಿಕೆಗೆ ಅನುಮತಿ ನೀಡುವ ಮಾತನ್ನಾಡಿರುವ ಸಂಸದರು ಮುಂದಿನ ಲೋಕಸಭೆ ಬಜೆಟ್ ವೇಳೆಗೆ ಗಣಿಗಾರಿಕೆಗೆ ಅನುಮತಿ ಸಿಗುವ ಭರವಸೆಯಿದೆ ಎಂದಿದ್ದಾರೆ. ಒಟ್ಟಿನಲ್ಲಿ ಇಡೀ ದೇಶಕ್ಕೆ ಚಿನ್ನ ಕೊಟ್ಟ ನಾಡು ಇಂದು ಬರಿದಾಗಿ ಇತಿಹಾಸದ ಪುಟ ಸೇರುವ ಮೊದಲೇ ಮತ್ತೊಮ್ಮೆ ಕೆಜಿಎಫ್ ತನ್ನ ಇತಿಹಾಸದ ಗತವೈಭವವನ್ನು ಜಗತ್ತಿಗೆ ಸಾರಲು ಒಂದೊಳ್ಳೆ ಅವಕಾಶ ಸಿಕ್ಕಂತಾಗಿದೆ.








