ಬೆಂಗಳೂರು: ಭಾರತದ ಶ್ರೀಮಂತ ಇತಿಹಾಸ, ಪರಂಪರೆ ಹಾಗೂ ಸಾಂಸ್ಕೃತಿಕ ವೈಭವವನ್ನು ನೃತ್ಯ, ಸಂಗೀತ ಮತ್ತು ಕಥನದ ಮೂಲಕ ಪರಿಚಯಿಸುವ ವಿಶೇಷ ಕಾರ್ಯಕ್ರಮ ಪರಮ್ ‘ಪರಂಪರಾ’ ಇದೇ ನವೆಂಬರ್ 21ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಪರಮ್ ಫೌಂಡೇಶನ್ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ರಾಣಿ ಅಹಲ್ಯಾಬಾಯಿ ಹೋಳ್ಕರ್ ಹಾಗೂ ರಾಜಾ ಸಯಾಜಿರಾವ್ ಅವರ ಜೀವನ ಮತ್ತು ಸಾಧನೆಗಳನ್ನು ಆಧರಿಸಿದ ಎರಡು ವಿಭಿನ್ನ ಕಲಾ ಪ್ರಸ್ತುತಿಗಳು ಮೂಡಿಬರಲಿವೆ. ನೃತ್ಯ, ಜಾನಪದ ಸಂಗೀತ, ಸಂಭಾಷಣೆ, ನಿರೂಪಣೆ ಹಾಗೂ ಹಿನ್ನೆಲೆ ಸಂಗೀತದ ಸಮನ್ವಯದೊಂದಿಗೆ ಈ ಎರಡೂ ಕಥನಗಳನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಲಾಗುತ್ತದೆ.
‘ರಾಣಿ ಅಹಲ್ಯಾಬಾಯಿ ಹೋಳ್ಕರ್’ ಪ್ರಸ್ತುತಿಯನ್ನು ವೈಷ್ಣವಿ ಸುಶೀಲಾ ರೂಪಿಸಿದ್ದು, ಆರಾಧ್ಯ ಪಾಟೀಲ್, ಮೈಥಿಲಿ ಕೂಡಲೆ, ಸ್ವೀಟಿ ಠಾಕೂರ್ ಹಾಗೂ ಸ್ವರಾ ಗಾಡ್ಗಿಲ್ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಶಾಹಿರ್ ಪೃಥ್ವಿರಾಜ್ ಜಾನಪದ ಸಂಗೀತವನ್ನು ರಚಿಸಿ, ಸಂಯೋಜಿಸಿ ಪ್ರಸ್ತುತಪಡಿಸಲಿದ್ದಾರೆ. ಸಂಭಾಷಣೆ ಮತ್ತು ನಿರೂಪಣೆಯನ್ನು ಚಂದ್ರಕಾಂತ್ ರಾವತ್ ಬರೆದಿದ್ದಾರೆ.
ಇದೇ ವೇಳೆ ‘ರಾಜಾ ಸಯಾಜಿರಾವ್’ ಪ್ರಸ್ತುತಿಯನ್ನು ಡಾ. ದ್ಯುತಿ ಪಾಂಡ್ಯಾ ರೂಪಿಸಿದ್ದು, ರೋಮಾ ಶುಕ್ಲಾ, ಪ್ರಶಸ್ತಿ ಶ್ರೇಯಸ್‌ಭಾಯಿ ಪೊಶಿಯಾ, ಅಂಜಲಿ ಸಂದೀಪ್‌ಭಾಯಿ ರಾವಲ್, ರಾಜಪೂತ್ ಪಾಲಕ್ ಪ್ರತಾಪ್ ಸಿಂಗ್, ತೃಪ್ತಿ ದಲ್ಪತ್‌ಭಾಯಿ ಸೋಲಂಕಿ, ಹೇಟಿಕಾ ಪಾಂಡ್ಯಾ, ದೀನಾ ರಾಮ್ ಹಾಗೂ ಅಕ್ಷಯ್ ರಾಥೋಡ್ ಸೇರಿದಂತೆ ಕಲಾವಿದರು ಭಾಗವಹಿಸಲಿದ್ದಾರೆ. ಗಾಯನ, ಸಂಗೀತ ಸಂಯೋಜನೆ, ಲಯ ಹಾಗೂ ಹಿನ್ನೆಲೆ ಸಂಗೀತದ ಮೂಲಕ ರಾಜಾ ಸಯಾಜಿರಾವ್ ಅವರ ಕಥನವನ್ನು ಕಟ್ಟಿಕೊಡಲಾಗುತ್ತದೆ.
ಇತಿಹಾಸದ ಮಹತ್ವದ ವ್ಯಕ್ತಿತ್ವಗಳನ್ನು ಸಾಂಪ್ರದಾಯಿಕ ಕಲಾ ಪ್ರಕಾರಗಳ ಮೂಲಕ ಇಂದಿನ ಪ್ರೇಕ್ಷಕರಿಗೆ ಪರಿಚಯಿಸುವ ಉದ್ದೇಶದಿಂದ ‘ಪರಂಪರಾ’ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಕಾರ್ಯಕ್ರಮ: ಪರಂಪರಾ
ದಿನಾಂಕ: ನವೆಂಬರ್ 21, 2026
ಸಮಯ: ಸಂಜೆ 6 ಗಂಟೆಯಿಂದ
ಸ್ಥಳ: ಬಸವ ಸಮಿತಿ, ಬಸವೇಶ್ವರ ವೃತ್ತ, ಬೆಂಗಳೂರು
ಕಲಾವಿದರಿಗೆ ₹2 ಲಕ್ಷ ಪ್ರೋತ್ಸಾಹಧನ
ಕಲಾವಿದರು ತಮ್ಮ ಪ್ರದರ್ಶನವನ್ನು ರೂಪಿಸುವ ಸಂದರ್ಭದಲ್ಲಿ ಎದುರಿಸುವ ಆರ್ಥಿಕ ಹಾಗೂ ತಾಂತ್ರಿಕ ಸವಾಲುಗಳನ್ನು ನಿವಾರಣೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಕೇವಲ ಆರ್ಥಿಕ ನೆರವು ನೀಡುವುದಕ್ಕೆ ಸೀಮಿತವಾಗದೆ, ಪ್ರದರ್ಶನಕ್ಕೆ ಅಗತ್ಯವಿರುವ ಸ್ಥಳ, ತಾಲೀಮು ವ್ಯವಸ್ಥೆ, ವೇದಿಕೆ ನಿರ್ಮಾಣ, ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಸೇರಿದಂತೆ ಸಂಪೂರ್ಣ ತಾಂತ್ರಿಕ ಸೌಲಭ್ಯಗಳನ್ನು ಫೌಂಡೇಶನ್ ಕಲ್ಪಿಸುತ್ತಿದೆ.
ಇದರಿಂದ ಕಲಾವಿದರು ತಮ್ಮ ಕಲಾ ಪ್ರದರ್ಶನದ ಗುಣಮಟ್ಟ ಮತ್ತು ಸೃಜನಶೀಲತೆಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗಲಿದೆ.ಕಲಾವಿದರ ಸೃಜನಶೀಲತೆ ಹಾಗೂ ಹೊಸ ಪ್ರಯೋಗಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಪರಮ್ ಫೌಂಡೇಶನ್ ತನ್ನ ‘ಕಲಾ ಪ್ರಸ್ತುತಿ’ ಯೋಜನೆಯಡಿ ಕಲಾವಿದರಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಕಳೆದ ಸಾಲಿನಲ್ಲಿ ಈ ಯೋಜನೆಗೆ ಸುಮಾರು 40 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳ ಪರಿಶೀಲನೆ ಬಳಿಕ ಎಂಟು ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಕಲಾವಿದರ ಕಲಾ ಪ್ರದರ್ಶನಕ್ಕೆ ₹2 ಲಕ್ಷ ಮೊತ್ತದ ಪ್ರೋತ್ಸಾಹಧನ ನೀಡಲಾಗುತ್ತಿದೆ.
ಕಲಾ ಪರಂಪರೆಯ ಉಳಿವಿಗೆ ಹೊಸ ಪ್ರಯತ್ನ
ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಕಡಿಮೆ ಪರಿಚಿತ ಐತಿಹಾಸಿಕ ಕಥೆಗಳು ಹಾಗೂ ವಿಭಿನ್ನ ಕಲಾ ಪ್ರಕಾರಗಳನ್ನು ಜನರಿಗೆ ತಲುಪಿಸುವುದು ಪರಮ್ ಕಲ್ಚರ್‌ನ ಈ ಉಪಕ್ರಮದ ಆಶಯವಾಗಿದೆ. ಕಲಾವಿದರು ತಮ್ಮದೇ ಆದ ಹೊಸ ಪರಿಕಲ್ಪನೆಗಳೊಂದಿಗೆ ಪ್ರದರ್ಶನಗಳನ್ನು ರೂಪಿಸಲು ಆರ್ಥಿಕ ನೆರವು ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಕಲಾ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳಿಗೆ ಸಂಸ್ಥೆ ಪ್ರೋತ್ಸಾಹ ನೀಡುತ್ತಿದೆ.








