Paresh Mestha Case | ಶೋಭಾ, ಈಶ್ವರಪ್ಪ, ಸಿ.ಟಿ.ರವಿ ಮೇಲೆ ಕೇಸ್ ಬುಕ್ ಮಾಡೋ ತಾಕತ್ತು ಸಿಎಂಗೆ ಇದ್ಯಾ ?
ಬೆಂಗಳೂರು : ಪರೇಶ್ ಮೆಸ್ತಾ ಪ್ರಕರಣದಲ್ಲಿ ಶೋಭಾ ಕರಂದ್ಲಾಜೆ, ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ, ಅನಂತ್ ಕುಮಾರ್ ಅವರು ತಪ್ಪು ಮಾಹಿತಿ ನೀಡಿ, ದಾರಿ ತಪ್ಪಿಸಿ ರಾಜ್ಯದಲ್ಲಿ ಬೆಂಕಿ ಹಚ್ಚಲು ಕಾರಣರಾಗಿದ್ದರು.
ಇವರ ಮೇಲೆ ಕೇಸ್ ಬುಕ್ ಮಾಡಲು ಮುಖ್ಯಮಂತ್ರಿಗಳಿಗೆ ತಾಕತ್ತು ಇದ್ಯಾ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಪರೇಶ್ ಮೆಸ್ತಾ ಸಾವು ಆಕಸ್ಮಿಕ ಎಂದು ಸಿಬಿಐ ವರದಿ ನೀಡಿದೆ. ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಕೋಮುವಿಷ ಬೀಜ ಬಿತ್ತಿ ಯುವಕರ ಭವಿಷ್ಯ ಹಾಳು ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿ ನಾಯಕರಿಗೆ ಮಾನವೀಯತೆ ಇದ್ದರೆ ಪರೇಶ್ ಮೇಸ್ತಾ ಕುಟುಂಬದ ಕ್ಷಮೆ ಕೇಳಬೇಕು.

ಪರೇಶ್ ಮೇಸ್ತಾ ಕೊಲೆ ನಡೆದಿಲ್ಲ, ಬದಲಾಗಿ ಆಕಸ್ಮಿಕ ಅಥವಾ ನೀರಿಗೆ ಮುಳುಗಿದ ಕಾರಣದಿಂದ ಸಾವು ಆಗಿದೆ ಎಂದು ಸಿಬಿಐ ವರದಿಯಲ್ಲಿದೆ.
ಅಲ್ಲದೇ ಕೋಮು ಕಾರಣದಿಂದಾಗಿ ಕೊಲೆ ನಡೆದಿಲ್ಲ ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಿದೆ.
ಸಿಬಿಐ ವರದಿಯಲ್ಲಿ ಪರೇಶ್ ಮೇಸ್ತ ಕೈ ಮೇಲೆ ಇರುವ ಶಿವಾಜಿ ಟ್ಯಾಟೋ ಹಾಗೆ ಇದೆ.
ಹಾಗಿದ್ದರೂ ಕೈ ಕಡಿಯಲಾಗಿದೆ. ಬಿಸಿ ಎಣ್ಣೆ ಕಣ್ಣಿಗೆ ಹಾಕಲಾಗಿದೆ ಎಂದು ಆರೋಪ ಮಾಡಿದ್ದರು.
ಹಿಂದೂ ಕಾರ್ಯಕರ್ತರ ಮೇಲಿನ ಕಾಳಜಿ ಇದೇನಾ ? ಶವದ ಮೇಲೆ ರಾಜಕೀಯ ಮಾಡಲು ನಾಚಿಕೆ ಆಗಲ್ಲವಾ ?
ಮಾನವೀಯತೆ ಇದ್ದರೆ ಪರೇಶ್ ಮೇಸ್ತ ಕುಟುಂಬಸ್ಥರ ಕ್ಷಮೆ ಕೇಳಿ ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.