ಮೊಬೈಲ್ ರೀಚಾರ್ಜ್ ಮೇಲೆ ಸೇವಾ ಶುಲ್ಕ ವಿಧಿಸಲು ಪ್ರಾರಂಭಿಸಿದ Paytm
ಕೆಲವು ತಿಂಗಳ ಹಿಂದೆ ಫೋನ್‌ಪೇ ಮೊಬೈಲ್ ರೀಚಾರ್ಜ್ ಮಾಡುವಾಗ ಸೇವಾ ಶುಲ್ಕದ ಹೆಸರಿನಲ್ಲಿ ಹೆಚ್ಚುವರಿ ಹಣ ಕಟ್ ಮಾಡಿಕೊಳ್ಳುವುದಾಗಿ ಹೇಳಿತ್ತು. ಇದಕ್ಕೆ ಗ್ರಾಹಕರು ತೀವ್ರವಾಗಿ ವಿರೋಧಿಸಿದ್ದರು. ಇದೀಗ Paytm ಮೊಬೈಲ್ ರೀಚಾರ್ಜ್ ಮಾಡಿಕೊಳ್ಳಲು ಹೆಚ್ಚುವರಿ ಶುಲ್ಕ ವಿಧಿಸಲು ಮುಂದಾಗಿದೆ. ನೀವು Paytm ಮೂಲಕ ಮೊಬೈಲ್ ರೀಚಾರ್ಜ್ ಮಾಡಿದರೆ, ನೀವು 1 ರಿಂದ 6 ರುಪಾಯಿವರೆಗೆ ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸೇವಾ ಶುಲ್ಕದ ಮೊತ್ತ ನಿಮ್ಮ ರೀಚಾರ್ಜ್ ಮೊತ್ತವನ್ನು ಅವಲಂಬಿಸಿರುತ್ತದೆ.
Paytm ಮೂಲಕ ಮಾಡಿದ ಎಲ್ಲಾ ಪಾವತಿ ವಿಧಾನಗಳಲ್ಲಿ ರೂ 1-6 ರುಪಾಯಿವರೆಗಿನ ಹೆಚ್ಚುವರಿ ಶುಲ್ಕಗಳು ಅನ್ವಯವಾಗುತ್ತವೆ. ನೀವು ಪೇಟಿಎಂ ಮೂಲಕ ಯುಪಿಐ ಪಾವತಿ ಮಾಡಿದರೂ ಸಹ ನಿಮಗೆ ಶುಲ್ಕ ವಿಧಿಸಬಹುದು. ಟ್ವಿಟರ್‌ನಲ್ಲಿ ಹಲವು ಬಳಕೆದಾರರು ಈ ಬಗ್ಗೆ ದೂರು ದಾಖಲಿಸಿದ್ದಾರೆ. Paytm ಪ್ರಕಾರ, ಈ ಶುಲ್ಕವನ್ನು ಪ್ಲಾಟ್‌ಫಾರ್ಮ್ ಶುಲ್ಕವಾಗಿ ತೆಗೆದುಕೊಳ್ಳಲಾಗುತ್ತಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನೀವು 100 ರೂಪಾಯಿಗಿಂತ ಹೆಚ್ಚಿನ ರೀಚಾರ್ಜ್ ಮಾಡಿದರೆ ಮಾತ್ರ ನಿಮ್ಮಿಂದ ಹೆಚ್ಚುವರಿ ಶುಲ್ಕವನ್ನು ತೆಗೆದುಕೊಳ್ಳಲಾಗುತ್ತದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಫೋನ್‌ಪೇ ಈಗ ಮೊಬೈಲ್ ರೀಚಾರ್ಜ್‌ಗೆ ಶುಲ್ಕ ವಿಧಿಸುವುದಾಗಿ ಅಧಿಕೃತವಾಗಿ ಹೇಳಿತ್ತು. ಕಂಪನಿಯ ಹೇಳಿಕೆಯ ಪ್ರಕಾರ, ರೂ 50 ಕ್ಕಿಂತ ಹೆಚ್ಚಿನ ರೀಚಾರ್ಜ್‌ಗೆ ರೂ 1 ಶುಲ್ಕ ವಿಧಿಸುವುದಾಗಿ ಹೇಳಿತ್ತು. 100 ರೂಗಿಂತ ಹೆಚ್ಚು ರೀಚಾರ್ಜ್ ಮಾಡಿದರೆ ನಿಮಗೆ ರೂ 2 ಶುಲ್ಕ ವಿಧಿಸಲಾಗುತ್ತದೆ.