ಉಡುಪಿ : ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಪ್ರಯೋಗಾಲಯದ ಆರಂಭಕ್ಕೆ ಕೇಂದ್ರ ಸರ್ಕಾರ ಕೊನೆಗೂ ಅನುಮತಿ ನೀಡಿದೆ.
ಈ ಬಗ್ಗೆ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾಹಿತಿ ನೀಡಿದ್ದು, ಕೆಎಂಸಿಯಲ್ಲಿ ಸುಸಜ್ಜಿತವಾದ, ಅತ್ಯಂತ ಆಧುನಿಕವಾದ ವೈರಾಲಜಿ ಪರೀಕ್ಷಾ ಪ್ರಯೋಗಾಲಯವಿದ್ದು, ಇದರಲ್ಲಿ ಕೊರೊನಾ ವೈರಸ್ ನ ಪರೀಕ್ಷೆ ಮಾಡಲು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ಅನುಮತಿ ನೀಡಿದೆ. ಐಸಿಎಂಆರ್‌ನಿಂದ ಕಳೆದ ಗುರುವಾರ ಅಧಿಕೃತವಾದ ಪರವಾನಿಗೆ ಪತ್ರ ಬಂದಿದೆ ಎಂದು ಹೇಳಿದ್ದಾರೆ.
ಇನ್ನು ನಮ್ಮಲ್ಲಿ ಸುಸಜ್ಜಿತವಾದ ಪ್ರಯೋಗಾಲಯವಿದೆ. ಕೆಲವು ಉಪಕರಣಗಳನ್ನು ಕೊರೊನಾ ಚಿಕಿತ್ಸೆಗಾಗಿ ಜೋಡಿಸಿಕೊಳ್ಳಬೇಕು. ಆದ್ದರಿಂದ ಈ ಪ್ರಯೋಗಾಲಯವು ಮುಂದಿನ ಸೋಮವಾರ-ಮಂಗಳವಾರದ ಸುಮಾರಿಗೆ ಕಾರ್ಯಾರಂಭವಾಗಲಿದೆ. ಅರ್ಧದಿನದೊಳಗೆ ಇಲ್ಲಿ ಫಲಿತಾಂಶ ಪಡೆಯಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.
ಈ ಮಧ್ಯೆ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಕೊರೊನಾ ಪರೀಕ್ಷೆ ಮಾಡಲು ಸುಸಜ್ಜಿತ ಪ್ರಯೋಗಾಲಯದ ಆರಂಭಕ್ಕೆ ರಾಜ್ಯ ಆರೋಗ್ಯ ಇಲಾಖೆ ಸಿದ್ಧತೆ ನಡೆಸುತ್ತಿದೆ. ಈ ಪ್ರಯೋಗಾಲಯವೂ ಈ ತಿಂಗಳ ಕೊನೆಯೊಳಗೆ ಕಾರ್ಯಾರಂಭಿಸುವ ನಿರೀಕ್ಷೆ ಇದೆ ಎಂದು ಜಿಲ್ಲಾಸ್ಪತ್ರೆಯ ಮೂಲಗಳು ತಿಳಿಸಿವೆ.








