ವಿರಾಟ್ ಕೊಹ್ಲಿ – ತಮನ್ನಾ ಭಾಟಿಯಾ ಬಂಧಿಸುವಂತೆ ಮದ್ರಾಸ್ ಹೈ ಕೊರ್ಟ್ ನಲ್ಲಿ ದೂರು ದಾಖಲು
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ ಅವರನ್ನು ಬಂಧಿಸುವಂತೆ ಮದ್ರಾಸ್ ಹೈಕೋರ್ಟ್ ನಲ್ಲಿ ದೂರು ಸಲ್ಲಿಸಲಾಗಿದೆ. ಜಾಹೀರಾತುನಲ್ಲಿ ಆನ್ ಲೈನ್ ಜೂಜಾಟವನ್ನು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿ ತಮಿಳುನಾಡಿನ ವಕೀಲರು ಮದ್ರಾಸ್ ಹೈಕೋರ್ಟ್ ನಲ್ಲಿ ದೂರು ದಾಖಲಿಸಿದ್ದಾರೆ.
ಆನ್ ಲೈನ್ ಜೂಜಾಟಕ್ಕೆ ಯುವಕರು ವ್ಯಸನಿಗಳಾಗುತ್ತಿದ್ದಾರೆ. ಈಗಾಗಲೇ ಅನೇಕ ಆತ್ಮಹತ್ಯೆ ಪ್ರಕರಣಗಳು ಕೂಡ ದಾಖಲಾಗಿವೆ. ಜೂಜಾಟದಿಂದ ಹಣವನ್ನು ಕಳೆದುಕೊಂಡು ಯುವಕರು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ. ಜೂಜಿನಲ್ಲಿ ಲಾಭ ಗಳಿಸಲು ಸಾಧ್ಯವಾಗದೇ ಇದ್ದಾಗ ಬಡ್ಡಿಗೆ ಹಣ ಪಡೆದು ಈ ಜೂಜಿನಲ್ಲಿ ಭಾಗಿಯಾಗುತ್ತಿದ್ದಾರೆ. ಬಳಿಕ ಈ ಗ್ಯಾಂಬಲ್‍ನಿಂದ ಹಣ ಕಳೆದು ಸಾಲ ಮರುಪಾವತಿಸಲು ಸಾಧ್ಯವಾಗದೇ ಸಾವಿಗೆ ಶರಣಾಗುತ್ತಿದ್ದಾರೆ. ಈಗಾಗಲೇ ತಮಿಳುನಾಡಿನಲ್ಲಿ ಇಂತಹ ಪ್ರಕರಣಗಳು ಹೆಚ್ಚಳವಾಗುತ್ತಿವೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಇನ್ನು ಆನ್ ಲೈನ್ ಜೂಜಿನ ಆಪ್‍ಗಳನ್ನು ನಿಷೇಧಿಸಬೇಕು ಎಂದು ಎಂಎಚ್‍ಸಿಗೂ ಮನವಿ ಮಾಡಿದ್ದಾರೆ. ಆನ್ ಲೈನ್ ಜೂಜಿನ ಕಂಪೆನಿಯು ಯುವಕರನ್ನು ಉತ್ತೇಜಿಸಲು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ತಮನ್ನಾ ಭಾಟಿಯಾ ಅವರನ್ನು ಪ್ರಚಾರಕ್ಕಾಗಿ ಬಳಸಿಕೊಂಡಿದೆ. ಹೀಗಾಗಿ ಇವರಿಬ್ಬರನ್ನು ಬಂಧಿಸುವಂತೆ ಅರ್ಜಿದಾರರು ದೂರು ಸಲ್ಲಿಸಿದ್ದಾರೆ.
ಮದ್ರಾಸ್ ಹೈಕೋರ್ಟ್ ಈ ಪ್ರಕರಣದ ಅರ್ಜಿಯನ್ನು ಮುಂದಿನ ಮಂಗಳವಾರ ವಿಚಾರಣೆ ನಡೆಸಲಿದೆ.
ವೃತ್ತಿಪರ ದೃಷ್ಟಿಯಿಂದ ಈ ಅರ್ಜಿಯು ವಿರಾಟ್ ಮತ್ತು ತಮನ್ನಾ ಅವರ ವೃತ್ತಿಪರಬದುಕಿಗೆ ತೊಂದರೆಯನ್ನುಂಟು ಮಾಡಬಹುದು. ವಿರಾಟ್ ಕೊಹ್ಲಿ ಮತ್ತು ತಮನ್ನಾ ಭಾಟಿಯಾ ಅವರಿಗೆ ತನ್ನದೇ ಆದ ಅಭಿಮಾನಿಗಳ ಬಳಗವಿದೆ. ಅದ್ರಲ್ಲೂ ವಿರಾಟ್ ಕೊಹ್ಲಿಯವರನ್ನು ಅನೇಕ ಯುವ ಕ್ರಿಕೆಟಿಗರು ಮಾದರಿಯನ್ನಾಗಿಸುತ್ತಿದ್ದಾರೆ. ಆದ್ರೆ ಈ ಗ್ಯಾಂಬಲ್ ಆಟಕ್ಕೆ ವಿರಾಟ್ ಉತ್ತೇಜನ ನೀಡುತ್ತಿರುವುದು ಸರಿಯಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಅಷ್ಟೇ ಅಲ್ಲ, ವಿರಾಟ್ ಕೊಹ್ಲಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಹೆಚ್ಚಾಗಿರುವುದರಿಂದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಯುಎಇಗೆ ಶಿಫ್ಟ್ ಮಾಡಲಾಗಿದೆ. ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿದೆ. ಆ ನಂತರ ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಮಾಡಲಿದೆ.