ರಾಜ್ಯದ ಜನತೆಗೆ ಗಿಫ್ಟ್ ಕೊಟ್ಟ ಪಶ್ಚಿಮ ಬಂಗಾಳ ಸರ್ಕಾರ – ಪೆಟ್ರೋಲ್, ಡೀಸೆಲ್ ದರ ಕಡಿತ
ಕೊಲ್ಕತ್ತಾ: ಸತತ ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ದೇಶದ ಜನರು ಕಂಗಾಲಾಗಿದ್ದಾರೆ. ದೇಶದಲ್ಲಿ ಪೆಟ್ರೋಲ್ ಡೀಸೆಲ್ ದರ 90 ರ ಗಡಿ ದಾಟಿದ್ದು, ಶೀಘ್ರವೇ 100ರೂ ಆಗುವ ಮೂಲಕ ಶತಕ ಬಾರಿಸಲಿದೆ. ಈ ನಡುವೆ ಚುನಾವಣೆ ಹೊಸ್ತಿಲಲ್ಲಿರುವ ಪಶ್ಚಿಮಬಂಗಾಳ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿತಗೊಳಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಇಳಿಕೆ ಮಾಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಒಂದು ರೂಪಾಯಿ ಇಳಿಕೆ ಮಾಡಲಾಗಿದೆ ಎಂದು ಹಣಕಾಸು ಸಚಿವ ಅಮಿತ್ ಮಿತ್ರ ತಿಳಿಸಿದ್ದಾರೆ. ಮಧ್ಯರಾತ್ರಿಯಿಂದಲೇ ಅನ್ವಯವಾಗುವಂತೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 1 ರೂ. ಕಡಿಮೆ ಮಾಡಲು ತೀರ್ಮಾನಿಸಲಾಗಿದೆ. ಈ ಮೂಲಕ ಪಶ್ಚಿಮ ಬಂಗಾಳ ಜನರಿಗೆ ಭರ್ಜರಿ ಗಿಫ್ಟ್ ನೀಡಲಾಗಿದೆ.
ತೈಲ ಬೆಲೆ ಏರಿಕೆ ಎಫೆಕ್ಟ್ : ನವ ದಂಪತಿಗೆ ಪೆಟ್ರೋಲ್ ಗಿಫ್ಟ್
ಇತ್ತ ಪೆಟ್ರೋಲ್ ಡೀಸೆಲ್ ದರ ಏರಿಕೆಯಾಗುತ್ತಲೇ ಇರುವ ಬಗ್ಗೆ ಮಾತನಾಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದೊಂದು ಸಮಸ್ಯೆಯ ವಿಚಾರವಾಗಿದ್ದು, ದರ ಇಳಿಕೆ ಹೊರತು ಬೇರೆ ಯಾವುದೇ ಉತ್ತರವಿಲ್ಲ ಎಂದು ಹೇಳಿರುವುದಾಗಿ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ವಿಷಯಕ್ಕೆ ದರ ಇಳಿಕೆ ಹೊರತು ಬೇರೆ ಉತ್ತರವಿಲ್ಲ. ತೈಲ ಮಾರಾಟ ಸಂಸ್ಥೆಗಳು ತೈಲ ದರವನ್ನು ನಿಗದಿಗೊಳಿಸುತ್ತವೆ. ಕಚ್ಚಾತೈಲದ ಆಮದು ವೆಚ್ಚ , ಅದರ ಸಂಸ್ಕರಣೆ ವೆಚ್ಚ, ಸಾಗಣೆ, ಪೂರೈಕೆ ವೆಚ್ಚ ಇದನ್ನೆಲ್ಲ ಲೆಕ್ಕಹಾಕಿ ತೈಲ ದರ ಏರಿಸಬೇಕೇ ಅಥವಾ ಇಳಿಸಬೇಕೇ ಎಂಬುದನ್ನು ತೈಲ ಮಾರಾಟ ಸಂಸ್ಥೆಗಳು ನಿರ್ಧರಿಸುತ್ತವೆ . ನವೆಂಬನಿರ್ಂದ ಬ್ರೆಂಟ್ ದರ ನಿರಂತರ ಏರಿಕೆಯಾಗಿರುವುದು ಮತ್ತು ತೈಲ ಉತ್ಪಾದನೆ ಮತ್ತು ರಫ್ತು ಮಾಡುವ ರಾಷ್ಟ್ರಗಳು ಉತ್ಪಾದನೆ ಮೊಟಕುಗೊಳಿಸಿರುವುದು ತೈಲ ಬೆಲೆಯೇರಿಕೆಗೆ ಕಾರಣವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿರುವುದಾಗಿ ತಿಳಿದುಬಂದಿದೆ. ಇನ್ನೂ ವಾಸ್ತವಾಂಶ ತಿಳಿಸಲು ನಾನೇನು ಹೇಳಿದರೂ, ನಾನು ಉತ್ತರಿಸುವುದರಿಂದ ಜಾರಿಕೊಳ್ಳುತ್ತಿದ್ದೇನೆ ಎಂದೇ ಭಾವಿಸಲಾಗುತ್ತೆ ಎಂದು ಹೇಳಿಕೊಂಡಿದ್ದಾರೆ.