ಹಂದಿ ಸಾಕಾಣಿಕೆ ಗುಡಿಸಲಿಗೆ ಕಿಡಿಗೇಡಿಗಳಿಂದ ಬೆಂಕಿ Pig saaksha tv
ಮಂಡ್ಯ : ಜಿಲ್ಲೆ ಪಾಂಡವಪುರ ಪಟ್ಟಣದ ಶಾಂತಿನಗರದ ಕರಿಬೆಟ್ಟದ ತಪ್ಪಲಿನಲ್ಲಿ ಕಿಡಿಗೇಡಿಗರು ಹಂದಿ ಸಾಕಾಣಿಕೆ ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ. ಪರಿಣಾಮ ಇನ್ನೂರಕ್ಕೂ ಹೆಚ್ಚು ಹಂದಿಗಳು ಮೃತಪಟ್ಟಿವೆ.
ಹಂದಿಜೋಗಿ ಶಿವರಾಜು ಎಂಬುವವರಿಗೆ ಸೇರಿದ ಹಂದಿಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟುಭಸ್ಮವಾಗಿವೆ.
ಶಿವರಾಜು ಪಾಂಡವಪುರದ ಶಾಂತಿನಗರದ ಬಳಿ ಇರುವ ಕರಿ ಬೆಟ್ಟದ ತಪ್ಪಲಿನ ನಿರ್ಜನ ಪ್ರದೇಶದಲ್ಲಿ ಮೂರು ಗುಡಿಸಲುಗಳನ್ನು ನಿರ್ಮಿಸಿಕೊಂಡು ಹಂದಿಗಳನ್ನು ಸಾಕಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಈ ಮಧ್ಯೆ ಗುಡಿಸಲಿನಲ್ಲಿ ಯಾರೂ ಇಲ್ಲದಿರುವುದನ್ನು ಖಾತ್ರಿಪಡಿಸಿಕೊಂಡ ಕಿಡಿಗೇಡಿಗಳು ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಗುಡಿಸಲಲ್ಲಿದ್ದ ಎಲ್ಲ ಹಂದಿಗಳು ಹೊರಬಾರಲು ಸಾಧ್ಯವಾಗದೆ ಮೃತಪಟ್ಟಿವೆ.
ವಿಷಯ ತಿಳಿಯುತ್ತಿದ್ದಂತೆ ಸುತ್ತಲಿನ ಪ್ರದೇಶದ ಜನರು ಘಟನಾ ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸಿದ್ದಾರೆ.