ಪುರುಷರ ಮೇಲೆ ಕೌಟುಂಬಿಕ ದೌರ್ಜನ್ಯ – “ರಾಷ್ಟ್ರೀಯ ಪುರುಷರ ಆಯೋಗ” ರಚಿಸಲು ಸುಪ್ರೀಂ ಗೆ ಮನವಿ…
ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ವಿವಾಹಿತ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಪುರುಷರಿಗಾಗಿ ರಾಷ್ಟ್ರೀಯ ಆಯೋಗವನ್ನು ರಚಿಸಲು ಮಾರ್ಗದರ್ಶನಗಳನ್ನ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ವಕೀಲ ಮಹೇಶ್ ಕುಮಾರ್ ತಿವಾರಿ ಅವರು ಮನವಿ ಸಲ್ಲಿಸಿದ್ದು, 2021 ರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ಪ್ರಕಾರ ಭಾರತದಲ್ಲಿ ಆಕಸ್ಮಿಕ ಸಾವುಗಳ ಡೇಟಾವನ್ನ ಉಲ್ಲೇಖಿಸಿದ್ದಾರೆ. ಆ ವರ್ಷದಲ್ಲಿ ದೇಶಾದ್ಯಂತ 1,64,033 ಜನರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಇವರಲ್ಲಿ 81,063 ಮಂದಿ ವಿವಾಹಿತ ಪುರುಷರು, 28,680 ವಿವಾಹಿತ ಮಹಿಳೆಯರು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
“2021 ರಲ್ಲಿ 33.2% ಪುರುಷರು ಕೌಟುಂಬಿಕ ಸಮಸ್ಯೆಗಳಿಂದಾಗಿ ಮತ್ತು 4.8% ವಿವಾಹ ಸಂಬಂಧಿತ ಸಮಸ್ಯೆಗಳಿಂದಾಗಿ ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ. ಈ ವರ್ಷದಲ್ಲಿ ಒಟ್ಟು 1,18,979 ಪುರುಷರು (72%) ಮತ್ತು ಒಟ್ಟು 45,026 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 27% ರಷ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಎನ್ಸಿಆರ್ಬಿ ಒದಗಿಸಿದ ಡೇಟಾವನ್ನು ಉಲ್ಲೇಖಿಸಿ ಹೇಳಲಾಗಿದೆ.
ವಿವಾಹಿತ ಪುರುಷರ ಆತ್ಮಹತ್ಯೆಯ ಸಮಸ್ಯೆಯನ್ನ ನಿಭಾಯಿಸಲು ಮತ್ತು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಪುರುಷರ ದೂರುಗಳನ್ನು ಸ್ವೀಕರಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ನಿರ್ದೇಶನವನ್ನ ಅರ್ಜಿಯಲ್ಲಿ ಕೋರಲಾಗಿದೆ.
“ಕೌಟುಂಬಿಕ ಹಿಂಸಾಚಾರದಿಂದ ಅಥವಾ ಕೌಟುಂಬಿಕ ಸಮಸ್ಯೆ ಮತ್ತು ವಿವಾಹ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ವಿವಾಹಿತ ಪುರುಷರ ಆತ್ಮಹತ್ಯೆಯ ವಿಷಯದ ಬಗ್ಗೆ ಸಂಶೋಧನೆ ನಡೆಸಲು ಭಾರತೀಯ ಕಾನೂನು ಆಯೋಗಕ್ಕೆ ನಿರ್ದೇಶನ/ಶಿಫಾರಸು ನೀಡಿ ಮತ್ತು ಅಂತಹ ವೇದಿಕೆಯನ್ನು ರಚಿಸುವ ಸಲುವಾಗಿ ಅಗತ್ಯ ವರದಿಯನ್ನು ನೀಡಿ ಎಂದು ಮನವಿಯಲ್ಲಿ ತಿಳಿಸಲಾಗಿದೆ.
Plea in Supreme Court seeks ‘National Commission for Men’ to address suicide by married men