ಬೆಂಗಳೂರು : ಸ್ಮಾರ್ಟ್ ಮೊಬೈಲ್ ಬಂದಾಗಿನಿಂದ ಎಲ್ಲರಿಗೂ ಸೆಲ್ಫಿ ಹುಚ್ಚು ಹಿಡಿದುಕೊಂಡಿದೆ. ಅದರಲ್ಲೂ ಕೆಲ ಹುಡುಗ- ಹುಡುಗಿಯರಂತೂ ಗಂಟೆಗೊಂದರಂತೆ ಸೆಲ್ಫಿ ತೆಗೆದುಕೊಂಡು ಆನ್ ಲೈನ್ ನಲ್ಲಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಹೀಗೆ ಅಪ್ಲೋಡ್ ಆದ ಫೋಟೋಗಳನ್ನು ತೆಗೆದುಕೊಂಡು ಕೆಲವರು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡೋದು, ಬ್ಲಾಕ್ ಮೇಲ್ ಮಾಡೋದು ಇತ್ತೀಚೆಗೆ ಹೆಚ್ಚಾಗಿದೆ. ಹೀಗಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು “ಅನಗತ್ಯವಾಗಿ ನಿಮ್ಮ ಹೆಣ್ಣು ಮಕ್ಕಳ ಫೋಟೋವನ್ನು ದಯವಿಟ್ಟು ಆನ್ ಲೈನ್ ನಲ್ಲಿ ಅಪ್ಲೋಡ್ ಮಾಡಬೇಡಿ. ಇದರಿಂದ ನಿಮಗೆ ಅವಮಾನ ಮಾಡುತ್ತಾರೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಸಂದರ್ಭದಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ಎಲ್ಲರೂ ಮನೆಯಲ್ಲೇ ಕೂತು ಸೈಬರ್ ಕ್ರೈಂ ಮಾಡಿದ್ದಾರೆ. ಕೆಲವರು ತರ್ಲೆ ಮಾಡಲು, ಫನ್ ಮಾಡಲು ಆನ್ ಲೈನ್ ನಲ್ಲಿ ಪಾಠ ಮಾಡುತ್ತಿದ್ದಾಗ ಅಶ್ಲೀಲ ಫೋಟೋ, ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಈ ಬಗ್ಗೆ ದೂರು ಬಂದರೆ ಖಂಡಿತ ಕ್ರಮ ತೆಗೆದುಕೊಳ್ಳುತ್ತೇವೆ. ಸೈಬರ್ ಕೂಡ ಮನೆಯಿದ್ದಂತೆ ಅದಕ್ಕೆ ಕಿಟಕಿ ಬಾಗಿಲು ಇರುತ್ತೆ. ಮನೆಯನ್ನ ಹೇಗೆ ಕಾಪಾಡುತ್ತೀವೋ ಹಾಗೆ ಆನ್ ಲೈನ್ ಬಗ್ಗೆನೂ ಎಚ್ಚರಿಕೆ ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು.
ಇನ್ನು ನಿಮ್ಮ ಮನೆಯ ಅಕ್ಕ-ತಂಗಿಯರು, ಪತ್ನಿಯರು, ಮಕ್ಕಳ ಫೋಟೋವನ್ನು ದಯವಿಟ್ಟು ಆನ್ ಲೈನ್ ನಲ್ಲಿ ಹಾಕಬೇಡಿ. ಇದರಿಂದ ಕೆಲವರು ನಿಮ್ಮ ಮನೆಯವರ ಫೋಟೋವನ್ನ ಅಶ್ಲೀಲವಾಗಿ ಸೃಷ್ಟಿಸುತ್ತಾರೆ. ಹೀಗಾಗಿ ಅನಗತ್ಯವಾಗಿ ನಿಮ್ಮ ಹೆಣ್ಣು ಮಕ್ಕಳ ಫೋಟೋವನ್ನು ದಯವಿಟ್ಟು ಆನ್ ಲೈನ್ ನಲ್ಲಿ ಅಪ್ಲೋಡ್ ಮಾಡಬೇಡಿ. ಇದರಿಂದ ನಿಮಗೆ ಅವಮಾನ ಮಾಡುತ್ತಾರೆ. ಇಂತಹ ಘಟನೆಗಳು ಲಾಕ್ ಡೌನ್ ಸಮಯದಲ್ಲಿ ಮನೆಯಿಂದ ಕೂತವರಿಂದ ನಡೆಯುತ್ತಿದೆ ಎಂದು ತಿಳಿಸಿದರು.








