ಕರ್ನಾಟಕದಲ್ಲಿ ಆಪ್ ಸರ್ಕಾರ ಬರಬೇಕು – ಅಖಾಡಕ್ಕಿಳಿದ ಕೇಜ್ರಿವಾಲ್
ಕರ್ನಾಟಕದಲ್ಲಿ ಆಪ್ ಸರ್ಕಾರ ಬರಬೇಕು. ನಾವು ಇಲ್ಲಿ ಸರ್ಕಾರ ರಚನೆ ಮಾಡೋಣ. ಈ ಮೂಲಕ 20%, 40% ದಂಧೆಗಳಿಗೆ ಕಡಿವಾಣ ಹಾಕೋಣ ಎಂದು ಹೇಳುವ ಮೂಲಕ ಕೇಜ್ರಿವಾಲ್ ಕರ್ನಾಟಕ ಚುನಾವಣೆಗೆ ಒಂದು ವರ್ಷ ಇರುವಾಗಲೇ ಅಖಾಡಕ್ಕೆ ಧುಮುಕಿದ್ದಾರೆ.
ಬಸವನ ಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಇಂದು ಆಪ್ ವತಿಯಿಂದ ರೈತ ಸಮಾವೇಶ ಏರ್ಪಡಿಸಲಾಗಿತ್ತು. ಕೇಜ್ರಿವಾಲ್ ಆವರು ವಿವಿಧ ಧಾನ್ಯಗಳು ಮತ್ತು ತರಕಾರಿಗಳ ರಾಶಿಗೆ ಪೂಜೆ ಮಾಡುವ ಮೂಲಕ ಬೃಹತ್ ರೈತ ಸಮಾವೇಶ ಉದ್ಘಾಟಿಸಿದರು. ಕೇಜ್ರಿವಾಲ್ ಅವರಿಗೆ ಕೋಡಿಹಳ್ಳಿ ಚಂದ್ರಶೇಖರ್ ಹಸಿರು ಶಾಲು ಹಾಕಿದರೆ ಕೆಲ ದಿನಗಳ ಹಿಂದೆ ಆಪ್ ಸೇರಿದ್ದ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಬೃಹತ್ ಹೂವಿನ ಹಾರವನ್ನು ಹಾಕಿ ಸನ್ಮಾನಿಸಿದರು.
ಭಾಷಣಕ್ಕೂ ಮುನ್ನ ಕ್ಷಮಿಸಿ ನನಗೆ ಕನ್ನಡ ಬರಲ್ಲ ತೀವ್ರ ಹಲ್ಲು ನೋವಿದೆ ಪೇನ್ ಕಿಲ್ಲರ್ ಹಾಕಿಕೊಂಡು ಇಲ್ಲಿಗೆ ಬಂದಿದ್ದೇನೆ. ನಿಮಗೆಲ್ಲರಿಗೂ ಆಪ್ ಪಕ್ಷಕ್ಕೆ ಸ್ವಾಗತ ಎಂದು ಸ್ವಾಗತಿಸಿ ನಂತರ ಭಾಷಣ ಆರಂಭಿಸಿದರು.
ದೆಹಲಿಯಲ್ಲಿ ಮಾತ್ರ ಉತ್ತಮ ಸರ್ಕಾರಿ ಶಾಲೆಗಳಿವೆ. ಇಂಥ ಸರ್ಕಾರಿ ಶಾಲೆಗಳನ್ನು ಕರ್ನಾಟಕದಲ್ಲೂ ಮಾಡೋಣ. ದೆಹಲಿಯಲ್ಲಿ ಅತ್ಯುತ್ತಮ ಸರ್ಕಾರಿ ಆಸ್ಪತ್ರೆ ಸೇವೆಗಳನ್ನ ಕೊಡ್ತಿದ್ದೇವೆ. ಆಸ್ಪತ್ರೆಯಲ್ಲಿ ಹೈಟೆಕ್ ಸೇವೆ ಸಿಗ್ತಿದೆ. ವಿದ್ಯುತ್ ದೆಹಲಿಯಲ್ಲಿ ಉಚಿತ. ಸರ್ಕಾರಿ ಶಾಲೆ, ವಿದ್ಯುತ್, ಆರೋಗ್ಯ, ನೀರು, ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ. ಇದು ಆಗಿದ್ದು ಒಂದು ಪ್ರಾಮಾಣಿಕ ರಾಜಕೀಯ ಪಕ್ಷ ಆಪ್ ನಿಂದ ಸಾಧ್ಯವಾಗಿದೆ ಎಂದು ಹೇಳಿದರು.
ಖುದ್ದು ಪ್ರಧಾನಿ ಮೋದಿ ನನಗೆ ಪ್ರಾಮಾಣಿಕ ಅಂತ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ನನ್ನ ಮನೆ, ಕಚೇರಿ ಮೇಲೆ ಐಟಿ ದಾಳಿ ಆಯ್ತು. ಅವರಿಗೆ ಏನೂ ಸಿಕ್ಲಿಲ್ಲ. ಪರಿಣಾಮವಾಗಿ ಮೋದಿ ನನಗೆ ಪ್ರಾಮಾಣಿಕ ಸರ್ಟಿಫಿಕೇಟ್ ಕೊಡ್ಬೇಕಾಯ್ತು
ಸ್ವಾತಂತ್ರ್ಯ ಬಂದಾಗಿಂದಲೂ ರೈತರ ಸ್ಥಿತಿ ಉತ್ತಮವಾಗಿಲ್ಲ. ನಾನು ಅಣ್ಣಾ ಹಜಾರೆ ಜೊತೆ ಹೋರಾಟ ಮಾಡ್ಕೊಂಡಿದ್ದೆ. ಭ್ರಷ್ಟಾಚಾರ ತೊಲಗಿಸಿ ಅಂತ ಅಣ್ಣಾಗೆ ಹೇಳಿದ್ದೆ ನಾನು. ಆಗ ಅವರು ನೀನು ಚುನಾವಣೆ ಗೆದ್ದು ಭ್ರಷ್ಟಾಚಾರ ಓಡಿಸು ಎಂದಿದ್ದರು. ನಾನು ಸಾಮಾನ್ಯ ಮನುಷ್ಯನನ್ನ ಕೆಣಕಬೇಡಿ ಅಂದೆ. ಅದರ ಪರಿಣಾಮ ಮೊದಲು ದೆಹಲಿಯಲ್ಲಿ ನಂತರ ಪಂಜಾಬ್‍ನಲ್ಲಿ ಆಪ್ ಸರ್ಕಾರ ರಚನೆಯಾಯಿತು. ಈಗ ನಮ್ಮ ಆದ್ಯತೆ ಕರ್ನಾಟಕ ಎಂದು ಹೇಳಿದರು.