ಶಿಂಜೋ ಅಬೆ ನಿಧನಕ್ಕೆ ಕಂಬನಿ ಮಿಡಿದ ಪ್ರಧಾನಿ ಮೋದಿ – ನಾಳೆ ಭಾರತದಲ್ಲಿ ಶೋಕಾಚರಣೆ
ಜಪಾನ್ ನಾ ಮಾಜಿ ಪ್ರಧಾನಿ ಶಿಂಜೊ ಅಬೆ ನಿಧನಕ್ಕೆ ಪ್ರಧಾನಿ ಕಂಬನಿ ಮಿಡಿದಿದ್ದಾರೆ. ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದ ಅಬೆ ಅವರ ಗೌರವಾರ್ಥ ನಾಳೆ ಒಂದು ದಿನಗಳ ಕಾಲ ಭಾರತದಲ್ಲಿ ಶೋಕಾಚರಣೆ ಘೋಷಿಸಲಾಗಿದೆ.
ಮಾಜಿ ಪ್ರಧಾನಿ ಶಿಂಜೋ ಅಬೆ ನಿಧನದ ಕುರಿತು ಪ್ರಧಾನಿ ಮೋದಿ ಟ್ವೀಟ್ ಮಾಡಿ ಕಂಬನಿ ಮಿಡಿದ್ದಿದ್ದಾರೆ. ತಮ್ಮ ಆಪ್ತಮಿತ್ರ ಶಿಂಜೊ ಅಬೆ ನಿಧನದಿಂದ ತೀವ್ರ ದುಃಖವಾಗಿದೆ. ಅವರು ಜಾಗತಿಕ ನಾಯಕರು ಮತ್ತು ಅತ್ಯುತ್ತಮ ಆಡಳಿತಗಾರರಾಗಿದ್ದರು. ಶಿಂಜೊ ಅಬೆ ಅವರು ಜಪಾನ್ ಮತ್ತು ಇಡೀ ವಿಶ್ವವನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯಲು ಇಡೀ ಜೀವನವನ್ನು ಸಮರ್ಪಿಸಿಕೊಂಡಿದ್ದರು. ಆರ್ಥಿಕತೆ ಮತ್ತು ಜಾಗತಿಕ ವ್ಯವಹಾರಗಳ ಬಗ್ಗೆ ಅವರಿಗಿದ್ದ ಆಳವಾದ ನೋಟ ತಮ್ಮ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ಸ್ಮರಿಸಿದ್ದಾರೆ.
ಅಬೆ ಅವರು ಭಾರತ-ಜಪಾನ್ ನಡುವಿನ ಬಾಂಧವ್ಯಗಳನ್ನು ಬಲಪಡಿಸಲು ಸದಾ ಉತ್ಸುಕರಾಗಿದ್ದರು. ಅವರು ಇತ್ತೀಚೆಗಷ್ಟೇ ಜಪಾನ್-ಭಾರತ ಒಕ್ಕೂಟದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಭಾರತ-ಜಪಾನ್ ನಡುವಿನ ಸಂಬಂಧಗಳನ್ನು ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯತ್ತ ಕೊಂಡೊಯ್ಯುವಲ್ಲಿ ಅಬೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅವರ ನಿಧನಕ್ಕೆ ಇಡೀ ಭಾರತ ಶೋಕ ವ್ಯಕ್ತಪಡಿಸುತ್ತಿದ್ದು, ಸಂಕಷ್ಟದ ಸಮಯದಲ್ಲಿ ನಾವು ಜಪಾನ್ ಸೋದರ-ಸೋದರಿಯರೊಂದಿಗೆ ನಿಂತಿದ್ದೇವೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಶಿಂಜೋ ಅಬೆ ಅವರ ನಿಧನಕ್ಕೆ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶಿಂಜೊ ಅಬೆ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಭಾರತ-ಜಪಾನ್ ನಡುವಿನ ಬಾಂಧವ್ಯಗಳನ್ನು ಬಲಪಡಿಸುವಲ್ಲಿ ಅಬೆ ಅವರು ಮಹತ್ವದ ಪಾತ್ರ ವಹಿಸಿದ್ದರು. ಅಬೆ ಅವರು ಕುಟುಂಬ ಸದಸ್ಯರು ಮತ್ತು ಜಪಾನ್ ಜನತೆಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತಿರುವುದಾಗಿ ವೆಂಕಯ್ಯನಾಯ್ಡು ಟ್ವೀಟ್ ಮಾಡಿದ್ದಾರೆ.
ಶಿಂಜೊ ಅಬೆ ಅವರ ನಿಧನದಿಂದ ಜಪಾನ್ ಗೆ , ಭಾರತಕ್ಕೆ, ವಿಶ್ವಕ್ಕೆ ಮತ್ತು ವೈಯಕ್ತಿಕವಾಗಿ ತಮಗೆ ದುಃಖದ ದಿನವಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಶೋಕ ವ್ಯಕ್ತಪಡಿಸಿದ್ದಾರೆ. ಶಿಂಜೊ ಅಬೆ ಅವರ 25 ವರ್ಷಗಳ ನೆನಪುಗಳನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ