ಬೆಂಗಳೂರಿನಲ್ಲಿ ನಡೆಯಲಿದೆ ಸೆಮಿಕಾನ್ ಇಂಡಿಯಾ ಸಮ್ಮೇಳನ | ಪ್ರಧಾನಿ ಮೋದಿ ಉದ್ಘಾಟನೆ
ನವದೆಹಲಿ: ಇಂದಿನಿಂದ ಮೂರು ದಿನಗಳ ಕಾಲ ದೇಶದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಸೆಮಿಕಾನ್ ಇಂಡಿಯಾ ಉದ್ಯಮ ಸಮ್ಮೇಳನವನ್ನು ಪ್ರಧಾನ ಮಂತ್ರಿ ನರೇದ್ರ ಮೋದಿ ಉದ್ಘಾಟಿಸಲಿದ್ದಾರೆ.
ಈ ಮೂಲಕ ಪ್ರಧಾನಿ ಮೋದಿ ಅವರು ದೇಶವನ್ನು ಸೆಮಿಕಂಡಕ್ಟರ್‌ಗಳು ಮತ್ತು ಮೈಕ್ರೊಪ್ರೊಸೆಸರ್‌ಗಳ ಉತ್ಪಾದನಾ ಕೇಂದ್ರವನ್ನಾಗಿಸಲು ಮಹತ್ವದ ಹೆಜ್ಜೆಯನ್ನು ಇಡುತ್ತಿದ್ದಾರೆ. ಇನ್ನೂ ಈ ಉದ್ಯಮ ಸಮ್ಮೇಳನವು ‘ಭಾರತದ ಸೆಮಿಕಂಡಕ್ಟರ್ ಪರಿಸರ ವೇಗವರ್ಧನೆ’ (Catalyzing India’s Semiconductor Ecosystem) ‘ ಎಂಬ ಘೋಷವಾಕ್ಯದೊಂದಿಗೆ ಜರುಗಲಿದೆ.
ಈ ಉದ್ಯಮ ಸಮ್ಮಳೇನದಲ್ಲಿ ಭಾರತವು ಜಾಗತಿಕ ಸೆಮಿಕಂಡಕ್ಟರ್ ಹಬ್ ಆಗಲು ಮತ್ತು ದೇಶದಲ್ಲಿ ಚಿಪ್ ಡಿಸೈನ್ ಮತ್ತು ಚಿಪ್ ಉತ್ಪಾದನಾ ಪರಿಸರ ವ್ಯವಸ್ಥೆ, ಅದರ ಅವಕಾಶಗಳು, ಸವಾಲುಗಳು ಮತ್ತು ನವೀನ ಪರಿಹಾರಗಳನ್ನು, ಸಂಶೋಧನಾ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವ ವಿಚಾರವಾಗಿ ಚರ್ಚೆ ನಡೆಸಲಾಗುತ್ತದೆ.
ಮೂರು ದಿನಗಳ ಈ ಸಮ್ಮೇಳನಕ್ಕೆ ಭಾರತ ಮತ್ತು ವಿದೇಶಗಳಲ್ಲಿನ ಸೆಮಿಕಂಡಕ್ಟರ್ ಮತ್ತು ಮೈಕ್ರೊಪ್ರೊಸೆಸರ್ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿರುವ ಉದ್ಯಮಿಗಳ ಭಾಗವಹಿಸುವಿಕೆಯನ್ನು ಈ ಸಮ್ಮೇಳನಕ್ಕೆ ನಿರೀಕ್ಷಿಸಲಾಗಿದೆ. ಇಂಡೋ – ಯುಸ್ ವೆಂಚರ್ ಪಾರ್ಟ್‌ನರ್ಸ್‌ನ ವಿನೋದ್ ಧಾಮ್, ಮೈಕ್ರಾನ್ ಟೆಕ್ನಾಲಜಿಯ ಅಧ್ಯಕ್ಷ ಮತ್ತು ಸಿಇಒ ಸಂಜಯ್ ಮೆಹ್ರೋತ್ರಾ, ಇಂಟೆಲ್ ಫೌಂಡ್ರಿ ಸೇವೆಗಳ ಅಧ್ಯಕ್ಷ ರಣಧೀರ್ ಠಾಕೂರ್, ಇಂಟೆಲ್ ಇಂಡಿಯಾದ ಮುಖ್ಯಸ್ಥ ನಿವೃತಿ ರೈ ಕೂಡಾ ಭಾಗವಹಿಸುವ ಸಾಧ್ಯತೆ ಇದೆ.
ಕೇಂದ್ರ ಮಾಹಿತಿ ತಂತ್ರಜ್ಞಾನ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಮೂರು ದಿನಗಳ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.







