ಇಂದು – ನಾಳೆ ಸಿಎಂಗಳ ಜತೆ ಮೋದಿ ಮೀಟಿಂಗ್, ಮತ್ತೆ ಮಾಡ್ತಾರಾ ಲಾಕ್‍ಡೌನ್..?
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮತ್ತೆ ನಾಳೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದು ಭಾರಿ ಕುತೂಹಲ ಮೂಡಿಸಿದೆ.
ಕಳೆದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸಿಎಂಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಮೋದಿ ದೇಶಾದ್ಯಂತ ಲಾಕ್‍ಡೌನ್ ಅವಧಿಯನ್ನು ವಿಸ್ತರಣೆ ಮಾಡಿದ್ದರು. ಇದೀಗ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3 ಲಕ್ಷ ದಾಟಿದ್ದು,
ದಿನನಿತ್ಯ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಮತ್ತೆ ದೇಶಾದ್ಯಂತ ಲಾಕ್‍ಡೌನ್ ಮಾಡುತ್ತಾರೆ ಎಂಬ ಚರ್ಚೆ ಸೋಶಿಯಲ್ ಮೀಡಿಯಾ ಸೇರಿದಂತೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಇಂದು ಮತ್ತು ನಾಳೆ ಮೋದಿ ನಡೆಸುವ ವಿಡಿಯೋ ಕಾನ್ಫರೆನ್ಸ್ ಮಹತ್ವ ಪಡೆದುಕೊಂಡಿದೆ.
ಇಂದು ಮಧ್ಯಾಹ್ನ 3 ಗಂಟೆಗೆ ಪಂಜಾಬ್, ಅಸ್ಸಾಂ, ಕೇರಳ, ಗೀವಾ ಸೇರಿದಂತೆ 21 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳು ಹಾಗೂ ನಾಳೆ ಮಧ್ಯಾಹ್ನ 3 ಗಂಟೆಯಿಂದ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಸೇರಿದಂತೆ 15 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜತೆ ಸಂವಾದ ನಡೆಸಲಿದ್ದು, ಕೊರೊನಾ ಪ್ರಕರಣಗಳ ಸ್ಥಿತಿಗತಿ, ಕೊರೊನಾ ತಡೆಗೆ ರಾಜ್ಯ ಸರ್ಕಾರಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
ಲಾಕ್‍ಡೌನ್ ಬಳಿಕ ಮೋದಿ ಮುಖ್ಯಮಂತ್ರಿಗಳ ಜತೆ ನಡೆಸುತ್ತಿರುವ 7ನೇ ವಿಡಿಯೋ ಕಾನ್ಫರೆನ್ಸ್ ಇದಾಗಿದೆ.
ಕಾಡುತ್ತಿದೆ ಲಾಕ್‍ಡೌನ್ ಗುಮ್ಮ..!
ದೇಶಾದ್ಯಂತ ಲಾಕ್‍ಡೌನ್ ಸಡಿಲಿಕೆಯಾಗುತ್ತಿದ್ದಂತೆ ಶರವೇಗದಲ್ಲಿ ಕೊರೊನಾ ವೈರಸ್ ಹರಡುತ್ತಿದೆ. ರಾಜ್ಯ ಸರ್ಕಾರಗಳು ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ಕೊರೊನಾ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮತ್ತೆ ಲಾಕ್‍ಡೌನ್ ಮಾಡಿದ್ರೆ ಕೊರೊನಾ ಹರಡುವಿಕೆ ತಡೆಯಬಹುದು. ಮೋದಿ ಮತ್ತೆ ಲಾಕ್‍ಡೌನ್ ಮಾಡುತ್ತಾರೆ ಎಂಬ
ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ದಿನ ನಿತ್ಯ ಚರ್ಚೆ ಆಗುತ್ತಿದೆ.
ಕೇಂದ್ರ ಆರೋಗ್ಯ ಸಚಿವರೇ ಲಾಕ್‍ಡೌನ್ ವಿಸ್ತರಣೆ ಇಲ್ಲ ಎಂದು ಹೇಳುತ್ತಿದ್ದರೂ, ಜನರಿಗೆ ಮಾತ್ರ ನಂಬಿಕೆ ಬರುತ್ತಿಲ್ಲ. ಹೀಗಾಗಿ ಮೋದಿ ನಡೆಸುವ ಸಭೆಯ ನಂತರ ಲಾಕ್‍ಡೌನ್ ಕತೆ ಏನಾಗುತ್ತೋ ಎಂದು ಜನರು ಆತಂಕದಲ್ಲೇ ಎದುರು ನೋಡುತ್ತಿದ್ದಾರೆ.
ಈಗಾಗಲೇ ಎರಡೂವರೆ ತಿಂಗಳ ಲಾಕ್‍ಡೌನ್‍ನಿಂದಾಗಿ ದೇಶದ ಜನತೆ ತತ್ತರಿಸಿ ಹೋಗಿದ್ದಾರೆ. ಮತ್ತೆ ಲಾಕ್‍ಡೌನ್ ಮಾಡಿದರೆ ಮುಂದೇನು ಗತಿ ಎಂಬ ಚಿಂತೆ ಜನರನ್ನು ಕಾಡುತ್ತಿದೆ. ಹೀಗಾಗಿ ಎಲ್ಲರ ಚಿತ್ತ ಮೋದಿ ಸಭೆಯತ್ತ ನೆಟ್ಟಿದೆ.








