ಜಗತ್ತು ಬಹಳಷ್ಟು ನಿರೀಕ್ಷೆ ಮತ್ತು ವಿಶ್ವಾಸದಿಂದ ಭಾರತವನ್ನು ನೋಡುತ್ತಿದೆ – ನರೇಂದ್ರ ಮೋದಿ…
ವಿವಿಧ ಕ್ಷೇತ್ರಗಳಲ್ಲಿ ಜಗತ್ತು ಬಹಳಷ್ಟು ನಿರೀಕ್ಷೆಗಳು ಮತ್ತು ವಿಶ್ವಾಸದಿಂದ ಭಾರತವನ್ನು ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೂರು ದಿನಗಳ ಜೈನ್ ಅಂತಾರಾಷ್ಟ್ರೀಯ ವ್ಯಾಪಾರ ಸಂಘಟನೆ – ಜಿತೋ ಕನೆಕ್ಟ್ -2022 ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಮೋದಿ ಆಡಳಿತ ವ್ಯವಸ್ಥೆಯಲ್ಲಿ ಹಲವಾರು ಅಡೆತಡೆಗಳನ್ನು ನಿವಾರಿಸುವ ಮೂಲಕ ಸುಗಮ ಜೀವನ ಮತ್ತು ಸುಗಮ ಆಡಳಿತಕ್ಕೆ ಸೂಕ್ತ ವೇದಿಕೆ ಕಲ್ಪಿಸಲಾಗಿದೆ. ಒಂದು ದೇಶ, ಒಂದು ತೆರಿಗೆ ನೀತಿಯಿಂದ ಸಾಕಷ್ಟು ರೀತಿಯಲ್ಲಿ ಅನುಕೂಲವಾಗಿದೆ. ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಪೂರೈಕೆ ಸರಪಳಿಗೆ ಮಹತ್ವದ ಕೊಡುಗೆ ನೀಡಿದೆ. ಜಗತ್ತು ಭಾರತದತ್ತ ಹೆಚ್ಚಿನ ವಿಶ್ವಾಸದಿಂದ ನೋಡುತ್ತಿದೆ. ವಿಶ್ವ, ಇಂದು ಭಾರತವನ್ನು ಗುರಿ ಸಾಧನೆಯ ದೇಶವಾಗಿ ಪರಿಗಣಿಸುತ್ತಿದೆ. ಜಾಗತಿಕ ಶಾಂತಿ, ಸ್ವಾವಲಂಬಿ ಭಾರತ, ನಮ್ಮ ಮಾರ್ಗ ಮಾತ್ರವಲ್ಲದೆ ಸಂಕಲ್ಪವೂ ಆಗಿದೆ ಎಂದರು.
ಭಾರತ ಇಂದು ಸಂಭವನೀಯತೆಯನ್ನು ಮೀರಿ ಚಲಿಸುತ್ತಿದೆ. ಜಾಗತಿಕ ಕಲ್ಯಾಣದ ಬಹುದೊಡ್ಡ ಉದ್ದೇಶವನ್ನು ನಿರ್ವಹಣೆ ಮಾಡುತ್ತಿದೆ. ಪ್ರತಿಭೆ, ವ್ಯಾಪಾರ ಮತ್ತು ತಂತ್ರಜ್ಞಾನವನ್ನು ಸಾಧ್ಯವಾದಷ್ಟು ರೀತಿಯಲ್ಲಿ ಪ್ರೋತ್ಸಾಹಿಸುತ್ತಿದೆ. ಪ್ರತಿ ದಿನ ಹತ್ತಾರು ನವೋದ್ಯಮಗಳು ನೋಂದಣಿಯಾಗುತ್ತಿವೆ. ಮಾರುಕಟ್ಟೆ ವಲಯವನ್ನು ವಿಸ್ತರಿಸಲು ಜಾರಿಗೆ ತಂದಿರುವ JEM ಪೋರ್ಟಲ್ ಗೆ ಹೆಚ್ಚಿನ ಬೇಡಿಕೆ ಕಂಡು ಬಂದಿದ್ದು, 40ಲಕ್ಷಕ್ಕೂ ಹೆಚ್ಚು ಮಾರಾಟಗಾರರು ಈ ವ್ಯಾಪ್ತಿಗೆ ಸೇರಿದ್ದಾರೆ. ಹಳ್ಳಿ ಮತ್ತು ಸಣ್ಣ ವ್ಯಾಪಾರಸ್ಥರು ಹಾಗೂ ಸ್ವಸಹಾಯ ಗುಂಪುಗಳು ತಮ್ಮ ಉತ್ಪನ್ನಗಳನ್ನು ಆಧುನಿಕ ಇ-ಮಾರುಕಟ್ಟೆ ಮೂಲಕ ಮಾರಾಟ ಮಾಡಬಹುದಾಗಿದೆ ಎಂದರು.