ಹೊಸದಿಲ್ಲಿ, ಮೇ 31 : ದೇಶದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶವಾಸಿಗಳನ್ನುದ್ದೇಶಿಸಿ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ ಲಾಕ್ ಡೌನ್ ಅನ್ನು ಸಡಿಲಿಕೆ ಮಾಡಿದ್ದು, ವ್ಯಾಪಾರ ವಹಿವಾಟುಗಳನ್ನು ಪುನರಾರಂಭಗೊಳಿಸಲಾಗಿದೆ. ಆದರೆ ಮಾರಕ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಹಿಂದಿನ ಸಂಕಲ್ಪವನ್ನು ಮರೆಯದೆ ಮತ್ತಷ್ಟು ಎಚ್ಚರಿಕೆಯಿಂದ ಇರುವಂತೆ ಪ್ರಧಾನಿ ಜನರಲ್ಲಿ ಮನವಿ ಮಾಡಿದರು.
ನಾನು ಕಳೆದ ಬಾರಿ ನಿಮ್ಮೊಂದಿಗೆ ಮಾತನಾಡುವ ಸಂದರ್ಭದಲ್ಲಿ ದೇಶದಲ್ಲಿ ರೈಲು, ಬಸ್ ಹಾಗೂ ವಿಮಾನ ಸಂಚಾರಗಳು ಬಂದ್ ಆಗಿದ್ದವು. ಆದರೆ, ಈ ಬಾರಿ ಲಾಕ್’ಡೌನ್ ಸಡಿಲಿಸಿದ್ದು, ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ರೈಲು ಹಾಗೂ ವಿಮಾನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಹಾಗಾಗಿ ಜನರು ಮೊದಲಿಗಿಂತಲೂ ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ಪ್ರಧಾನಿ ಹೇಳಿದರು. ಬೇರೆ ದೇಶಗಳಿಗೆ ಹೋಲಿಸಿದರೆ, ನಮ್ಮಲ್ಲಿ ಜನಸಂಖ್ಯೆ ಹೆಚ್ಚು. ಆದರೂ ನಾವು ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದ್ದೇವೆ. ಇದೀಗ ಲಾಕ್ ಡೌನ್ ಸಡಿಲಿಸಿದ್ದು ಅರ್ಥಿಕ ಚಟುವಟಿಕೆಗಳು ಪುನರಾರಂಭಗೊಂಡಿದೆ. ಈ ಸಮಯದಲ್ಲಿ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಗಳನ್ನು ಧರಿಸುವುದು, ಮನೆಯಲ್ಲಿಯೇ ಹೆಚ್ಚಿನ ಸಮಯ ಕಳೆಯಲು ಪ್ರಯತ್ನಿಸಿ ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರತಿಯೊಬ್ಬರ ಸಹಕಾರದೊಂದಿಗೆ ಕೊರೊನಾ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕಿದೆ. ಕೊರೊನಾ ವೈರಸ್ ನ ಈ ಸಂದರ್ಭದಲ್ಲಿ ಹಳ್ಳಿಗಳಿಂದ ಹಿಡಿದು ನಗರದವರೆಗೆ ಕೊರೊನಾ ವಿರುದ್ಧ ಹೊಸ ಮಾರ್ಗ ಕಂಡು ಹಿಡಿಯುವ ನಿಟ್ಟಿನಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆವಿಷ್ಕಾರಗಳು ನಡೆಯುತ್ತಿವೆ ಇದು ನನ್ನ ಹೃದಯವನ್ನು ಮುಟ್ಟಿದೆ ಎಂದು ತಿಳಿಸಿದರು.
ದೇಶದ 130 ಕೋಟಿ ಜನರು ಒಟ್ಟಿಗೆ ಸೇರಿ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕವನ್ನು ವೇಗಗತಿಯಲ್ಲಿ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತಿದೆ. ಇದಕ್ಕಾಗಿ ದೇಶದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ. ದೇಶದ ವಿವಿಧ ಭಾಗಗಳ ಜನರು ತಮ್ಮದೇ ಆದ ರೀತಿಯಲ್ಲಿ ಇತರ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ತಮಿಳುನಾಡಿನ ಸಿ. ಮೋಹನ್ ಅವರು ತಮ್ಮ ಮಗಳ ಶಿಕ್ಷಣಕ್ಕಾಗಿ ಕೂಡಿಟ್ಟಿದ್ದ ಎಲ್ಲಾ 5 ಲಕ್ಷ ರೂಪಾಯಿ ಹಣವನ್ನು ಲಾಕ್ ಡೌನ್ ಸಂದರ್ಭದಲ್ಲಿ ಸಂತ್ರಸ್ತರಿಗಾಗಿ ನೀಡಿದ್ದಾರೆ. ಇಂತಹ ಬಹಳಷ್ಟು ಘಟನೆಗಳು ದೇಶದ ಮೂಲೆ ಮೂಲೆಗಳಲ್ಲಿ ನಡೆದಿದ್ದು, ಇದು ತುಂಬಾ ಸಂತೋಷದ ವಿಚಾರ. ಎಲ್ಲರೂ ಒಗ್ಗಟ್ಟಿನಿಂದ ಸೇವಾ ಮನೋಭಾವ ತೋರುತ್ತಿರುವುದಕ್ಕೆ ನಾನು ಅವರನ್ನು ಅಭಿನಂದಿಸುತ್ತಿದ್ದೇನೆ. ಕೊರೋನಾ ವಿರುದ್ಧ ಹೋರಾಟಕ್ಕೆ ಜನರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು ಬೇರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ನಮ್ಮ ದೇಶದಲ್ಲಿ ಕೊರೊನಾ ವೈರಸ್ ಅಷ್ಟೊಂದು ವ್ಯಾಪಕವಾಗಿ ಹರಡಿಲ್ಲ ಎಂದು ಪ್ರಧಾನಿ ತಿಳಿಸಿದರು.
ನಮ್ಮ ದೇಶ, ನಮ್ಮ ರಾಜ್ಯ, ನಮ್ಮ ಊರು ಮತ್ತು ಗ್ರಾಮಗಳಲ್ಲಿ ಆತ್ಮನಿರ್ಭರ್ ಮಂತ್ರ ಪಠಿಸಬೇಕಿದ್ದು, ಕೊರೋನಾ ವಿರುದ್ಧದ ಭಾರತ ಹೋರಾಟ ಸರಿಯಾದ ಮಾರ್ಗದಲ್ಲಿ ಸಾಗುತ್ತಿದೆ. ಇಂದು ನಾವು ಎದುರಿಸುತ್ತಿರುವ ಸವಾಲುಗಳು ಮುಂದಿನ ಭವಿಷ್ಯಕ್ಕೆ ಪಾಠವಾಗಲಿದೆ ಎಂದರು. ಕೊರೋನಾ ವಿರುದ್ಧ ಹೋರಾಟಕ್ಕೆ ಯೋಗ ಸಹಕಾರಿಯಾಗುತ್ತದೆಯೇ ಎಂಬ ಪ್ರಶ್ನೆಗಳೂ ಕೂಡ ಕೇಳಿ ಬರುತ್ತಿದ್ದು, ಯೋಗ ಮತ್ತು ಆಯುರ್ವೇದದಿಂದ ಜನರು ಮಾನಸಿಕವಾಗಿ ಸದೃಢವಾಗಬಹುದು. ಕೊರೋನಾ ಸೋಂಕಿತರಲ್ಲಿ ಉಸಿರಾಟ ಸಮಸ್ಯೆ ಎದುರಾಗುತ್ತಿದ್ದು, ಯೋಗದಿಂದ ಉಸಿರಾಟದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಯೋಗದಲ್ಲಿ ಹಲವು ಬಗೆಯ ಪ್ರಾಣಾಯಾಮಗಳಿದ್ದು, ಇದರಿಂದ ಉಸಿರಾಟದ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ. ಕಪಾಲಬಾತಿ, ಅನುಲೋಮ ಯೋಗದಿಂದ ಉಸಿರಾಟ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಪ್ರಧಾನಿ ಹೇಳಿದರು.
ಆಯುಷ್ಮನ್ ಯೋಜನೆ ಮೂಲಕ ದೇಶದ ಕೋಟ್ಯಾಂತರ ಬಡ ಜನರಿಗೆ ನೆರವು ನೀಡಲಾಗುತ್ತಿದ್ದು, ನಾರ್ವೆ ಮತ್ತು ಸಿಂಗಾಪುರ ದೇಶಗಳ ಜನಸಂಖ್ಯೆಗಿಂತ ಎರಡು ಪಟ್ಟು ಹೆಚ್ಚಿನ ಜನರಿಗೆ ಆಯುಷ್ಮಾನ್ ಯೋಜನೆ ನೆರವಾಗಿದೆ.
ನಿಮ್ಮನ್ನು, ನಿಮ್ಮ ಕುಟುಂಬವನ್ನು ಕೊರೊನಾ ವೈರಸ್ ನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸಿ, ಬಹಳಷ್ಟು ಎಚ್ಚರಿಕೆ ವಹಿಸಿಕೊಳ್ಳಿ. ಕೊರೋನಾ ವಿರುದ್ಧದ ಹೋರಾಟಕ್ಕೆ ನೀವೆಲ್ಲರೂ ನಮ್ಮೊಂದಿಗೆ ಕೈಜೋಡಿಸುತ್ತೀರಿ ಎಂಬುವುದಾಗಿ ನಾನು ನಂಬಿದ್ದೇನೆ ಎಂದು ತಿಳಿಸಿದರು.








