ವಿಷ ತಿಂದು ಹುಲಿಗಳು ಸತ್ತ ಘಟನೆ ಮರೆಯುವ ಮುನ್ನವೇ ಈಗ ಅಣ್ಣಮಲೈ ಕಾಡಿನಲ್ಲಿ ಕಾಡುನಾಯಿಗಳಿಗೆ ವಿಷಪ್ರಾಷನ:
ತಮಿಳುನಾಡು, ಸೆಪ್ಟೆಂಬರ್12: ಆಗಸ್ಟ್ 31 ರಂದು ಮಧುಮಲೈ ಹುಲಿ ಮೀಸಲು ಬಫರ್ ವಲಯದ ಸಿಂಗಾರಾ ಶ್ರೇಣಿಯ ಕಲ್ಲಳ್ಳ ಪ್ರದೇಶದಲ್ಲಿ 50 ವರ್ಷದ ಬುಡಕಟ್ಟು ಮಹಿಳೆಯನ್ನು ನರಭಕ್ಷಕ ವ್ಯಾಘ್ರ ಕೊಂದಿತ್ತು. ವಯಸ್ಸಾದ ಹುಲಿಯು ಸುಲಭವಾದ ಗುರಿಯಾಗಿದ್ದ ಮಹಿಳೆಯ ಮೇಲೆ ಆಕ್ರಮಣ ಮಾಡಿರಬಹುದು ಎಂದು ಅಂದಾಜಿಸಲಾಗಿತ್ತು. ಬಳಿಕ ಸಿಂಗಾರಾ ಶ್ರೇಣಿಯಲ್ಲಿ ಕಾಡುಹಂದಿಯೊಂದು ಸಾವನ್ನಪ್ಪಿತ್ತು. ಇದು ವಿಷ ಸೇವನೆಯಿಂದ ಮೃತಪಟ್ಟಿದೆ ಎಂದು ವರದಿಯಾಗಿತ್ತು.
ಅಣ್ಣಾಮಲೈ ವ್ಯಾಪ್ತು ಕಾಡಿನಲ್ಲಿ ಇತ್ತೀಚೆಗೆ ಎರಡು ಹುಲಿಗಳು ಮೃತಪಟ್ಟಿದ್ದವು. ಕಾಡುಹಂದಿಯ ವಿಷದ ಶವವನ್ನು ತಿಂದು ಎರಡು ಹುಲಿಗಳು ಮೃತಪಟ್ಟಿವೆ ಎಂದು ಹೇಳಲಾಗಿತ್ತು. ಸೆಪ್ಟೆಂಬರ್ 9 ರಂದು, ನಾಲ್ಕು ಕಾಡು ನಾಯಿಗಳು ಜಿಂಕೆಯ ಮಾಂಸವನ್ನು ಸೇವಿಸಿ ಸಾವನ್ನಪ್ಪಿದ್ದವು. ಸೆಪ್ಟೆಂಬರ್ 10ರಂದು ಮತ್ತೊಂದು ಕಾಡು ನಾಯಿಯ ಮೃತದೇಹ ಪತ್ತೆಯಾಗಿದ್ದು, ಸಾವನ್ನಪ್ಪಿದ ಕಾಡು ನಾಯಿಗಳ ಸಂಖ್ಯೆ ಐದಕ್ಕೆ ಏರಿದೆ.
ತಮಿಳುನಾಡು ಅರಣ್ಯ ಇಲಾಖೆ ಕೊಯಮತ್ತೂರು ಮತ್ತು ಚೆನ್ನೈನ ವಿಧಿವಿಜ್ಞಾನ ಪ್ರಯೋಗಾಲಯಗಳಿಗೆ ಒಳಾಂಗಗಳ ಮಾದರಿಗಳನ್ನು ಕಳುಹಿಸಿದೆ.
ಜಿಲ್ಲಾ ಅರಣ್ಯ ಅಧಿಕಾರಿಯ ಪ್ರಕಾರ, ಈ ಪ್ರಾಣಿಗಳು ವಿಷಯುಕ್ತ ಆಹಾರ ಸೇವನೆಯಿಂದ ಸಾವನ್ನಪ್ಪಿದೆ. ಈ ಘಟನೆಗಳನ್ನು ನೋಡುವಾಗ ಕಾಡುಹಂದಿ ಮತ್ತು ಜಿಂಕೆಗಳ ಶವವನ್ನು ಹುಲಿಯನ್ನು ಕೊಲ್ಲಲು ವಿಷಪೂರಿತಗೊಳಿಸಲಾಗುತ್ತಿದೆಯೇ ಎಂಬ ಸಂಶಯ ಮೂಡುತ್ತಿದೆ.
ಮೇಲ್ನೋಟಕ್ಕೆ ಅಣ್ಣಾಮಲೈ ಅರಣ್ಯದಲ್ಲಿ ಸೇಡು ತೀರಿಸಿಕೊಳ್ಳುವ ದೃಷ್ಟಿಯಿಂದ ಕಾಡು ಹಂದಿ, ಜಿಂಕೆಗೆ ವಿಷಸೇವನೆ ಮಾಡಿಸಿ ಆ ಪ್ರಾಣಿಗಳ ಮಾಂಸ ಸೇವನೆಯಿಂದ ಹುಲಿ, ಕಾಡು ನಾಯಿಗಳನ್ನು ಕೊಂದಿರುವಂತೆ ಭಾಸವಾಗುತ್ತಿದೆ. ಅಣ್ಣಾಮಲೈನಲ್ಲಿ ಏನಾಯಿತು ಅದೇ ರೀತಿ ಸಿಂಗಾರಾ ಶ್ರೇಣಿಯಲ್ಲಿಯೂ ಹುಲಿಯ ಮೇಲೆ
ಸೇಡು ತೀರಿಸಿಕೊಳ್ಳುವ ಕಾರಣದಿಂದ ಕಾಡುಹಂದಿಗೆ ವಿಷಪ್ರಾಶನ ಮಾಡಿದ್ದರೆ ನಿಜಕ್ಕೂ ಅದು ಆತಂಕಕಾರಿ ವಿಷಯ. ಅಥವಾ ಇದರ ಹಿಂದೆ ಕಳ್ಳಬೇಟೆಗಾರರ ಜಾಲವಿದೆಯಾ ಪತ್ತೆ ಮಾಡಬೇಕಿದೆ.








