ಕೊರೊನಾ ಸೋಂಕು ಹರಡದಂತೆ ತಡೆಯಲು ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಲಾಕ್ ಡೌನ್ ವೇಳೆಯಲ್ಲಿ ಡ್ಯೂಟಿ ಮಾಡುತ್ತಿದ್ದ ಪೊಲೀಸರ ಕೈ ಕಟ್ ಮಾಡಿರುವ ಘಟನೆ ನಡೆದಿದೆ. ಪಂಜಾಬ್ನ ಪಟಿಯಾಲಾದ ಸಾನುರ್ ತರಕಾರಿ ಮಾರ್ಕೆಟ್ನಲ್ಲಿ ನಿಹಾಂಗ್ಸ್ ಗುಂಪೊಂದು ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ.
ನಡೆದಿದ್ದು ಏನು …..
ಕೊರೊನಾಸುರನ ವಿರುದ್ದ ಹೋರಾಟ ನಡೆಸಲು ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಅಗತ್ಯ ವಸ್ತುಗಳ ಲಭ್ಯತೆ ಇರುತ್ತದೆ. ಅದು ಸಹ ಸಾಮಾಜಿಕ ಅಂತರ ಕಾಪಾಡಿಕೊಂಡು ಪಡೆಯಬೇಕು. ಆದರೆ ಪಂಜಾಬ್ ಪಟಿಯಾಲಾದ ಸಾನುರ್ ಮಾರುಕಟ್ಟೆಯಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿ ತರಕಾರಿ ಮಾರುಕಟ್ಟೆಯಲ್ಲಿ ಗುಂಪು ಸೇರಿದ್ದರು. ಈ ವಿಚಾರವಾಗಿ ಪೊಲೀಸರು ಅಲ್ಲಿರುವವರಿಗೆ ಕರ್ಫ್ಯೂ ಪಾಸ್ ತೋರಿಸುವಂತೆ ಕೇಳಿದ್ದಾರೆ. ಆದರೆ ಈ ಗುಂಪು ಪಾಸ್ ತೋರಿಸದೆ, ಐರನ್ ರಾಡ್, ಕತ್ತಿಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದೆ. ತಮ್ಮ ವಾಹನಗಳಿಂದ ಬ್ಯಾರಿಕೇಡ್ಗಳಿಗೆ ಮತ್ತು ಮಾರ್ಕೆಟ್ನ ಗೇಟ್ಗಳಿಗೆ ಡಿಕ್ಕಿ ಮಾಡಿ ನುಜ್ಜುಗುಜ್ಜು ಮಾಡಿದ್ದಾರೆ ಎಂದು ಪಟಿಯಾಲಾ ಎಸ್ಪಿ ಮಂದೀಪ್ ಸಿಂಗ್ ಸಿಧು ತಿಳಿಸಿದ್ದಾರೆ.
ಅಸಿಸ್ಟಂಟ್ ಸಬ್ ಇನ್ಸ್ಪೆಕ್ಟರ್ ಕೈಯನ್ನು ಕತ್ತಿಯಿಂದ ಕತ್ತರಿಸಿದ್ದಾರೆ. ಇನ್ನಿಬ್ಬರು ಪೊಲೀಸ್ ಅಧಿಕಾರಿಗಳೂ ಕೂಡ ಗಂಭೀರ ಗಾಯಗೊಂಡಿದ್ದಾರೆ. ತರಕಾರಿ ಪಡೆಯಲು ಬಂದಿದ್ದ ನಿಹಾಂಗ್ಸ್ ಗುಂಪು ಸಾಮಾಜಿಕ ಅಂತರ ಕಾಪಾಡಿಕೊಂಡಿರಲಿಲ್ಲ. ಹಾಗಾಗಿ ಡ್ಯೂಟಿಯಲ್ಲಿ ಇದ್ದ ಅಧಿಕಾರಿಗಳು ಇದನ್ನು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ, ಸಾಲಿನಲ್ಲಿ ನಿಲ್ಲದೆ, ತರಕಾರಿ ಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದರು. ಆಗ ಅಧಿಕಾರಿಗಳು ಮತ್ತು ಗುಂಪಿನ ನಡುವೆ ಮಾತಿನ ಚಕಮಕಿ ಶುರುವಾಯಿತು. ಈ ಸಮಯದಲ್ಲಿ ಡ್ಯೂಟಿಯಲ್ಲಿದ್ದ ಪೊಲೀಸರು ಹೋಗಿ ಗುಂಪಿನಲ್ಲಿದ್ದವರ ಬಳಿ ಕರ್ಫ್ಯೂ ಪಾಸ್ ತೋರಿಸುವಂತೆ ಕೇಳಿದ್ದಾರೆ. ಅಷ್ಟಕ್ಕೇ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಹಾಗಾಗಿ ಹಲ್ಲೆ ಮಾಡಿದವರ ಮೇಲೆ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲು ಮಾಡಲಾಗಿದೆ.








