ಬೆಂಗಳೂರು:ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಚರ್ಚೆಗಳು ನಡೆಯುತ್ತಿರುವಾಗಲೇ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೊಸ ಬಾಂಬ್ ಸಿಡಿಸಿದ್ದಾರೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ರಾಜಕೀಯ ಭವಿಷ್ಯದ ಬಗ್ಗೆ ತಾನು ಪ್ರಸಿದ್ಧ ಜ್ಯೋತಿಷ್ಯಾಲಯವೊಂದರಲ್ಲಿ ಜಾತಕ ಕೇಳಿರುವುದಾಗಿ ಹೇಳುವ ಮೂಲಕ, ಕಮಲ ಪಾಳಯದಲ್ಲಿನ ಆಂತರಿಕ ಬೇಗುದಿಯನ್ನು ವ್ಯಂಗ್ಯಭರಿತವಾಗಿ ಜಗಜ್ಜಾಹೀರು ಮಾಡಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಬಿಜೆಪಿಯಲ್ಲಿ ದೊಡ್ಡ ಕ್ರಾಂತಿಯಾಗಲಿದ್ದು, ಆರ್. ಅಶೋಕ್ ಅವರ ಕುರ್ಚಿಗೆ ಕಂಟಕವಿದೆ ಎಂದು ಅವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಅಶೋಕ್ ಜಾತಕ: ಅಕ್ಟೋಬರ್ ಕ್ರಾಂತಿ!
ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ಆರ್. ಅಶೋಕ್ ವಿರುದ್ಧ ನೇರ ವಾಗ್ದಾಳಿ ನಡೆಸಿದರು. “ಆರ್. ಅಶೋಕ್ ಅವರು ಔಟ್ ಗೋಯಿಂಗ್ (ಹೊರಹೋಗುವ) ವಿಪಕ್ಷ ನಾಯಕ, ಕಾರ್ಕಳ ಶಾಸಕ ಸುನೀಲ್ ಕುಮಾರ್ ಇನ್ ಕಮ್ಮಿಂಗ್ (ಒಳಬರುವ) ವಿಪಕ್ಷ ನಾಯಕ. ಪದ್ಮನಾಭನಗರದ ಜ್ಯೋತಿಷ್ಯಾಲಯ ಸುಳ್ಳು ಹೇಳುತ್ತದೆ, ಹಾಗಾಗಿ ನಾನು ಬೇರೆ ಜ್ಯೋತಿಷ್ಯಾಲಯಕ್ಕೆ ಹೋಗಿದ್ದೆ. ಅಲ್ಲಿನ ಜಾತಕದ ಪ್ರಕಾರ, ಅಕ್ಟೋಬರ್‌ನಲ್ಲಿ ಆರ್. ಅಶೋಕ್ ಅವರ ಕುರ್ಚಿ ಅಲುಗಾಡಲಿದೆ. ಬಿಜೆಪಿಯಲ್ಲಿ ‘ಅಕ್ಟೋಬರ್ ಕ್ರಾಂತಿ’ ಆಗುವುದು ನಿಶ್ಚಿತ. ಸುನೀಲಣ್ಣನವರು, ಅಶೋಕ್ ಯಾವಾಗ ಕುರ್ಚಿ ಬಿಡುತ್ತಾರೆ ಎಂದು ಕಾಯುತ್ತಿದ್ದಾರೆ,” ಎಂದು ಭವಿಷ್ಯ ನುಡಿದರು.
ಯತ್ನಾಳ್, ಜೋಷಿ, ಸಂತೋಷ್: ತೆರೆಮರೆಯ ಆಟದ ಜಾತಕ!
ಕೇವಲ ಅಶೋಕ್ ಮಾತ್ರವಲ್ಲದೆ, ಬಿಜೆಪಿಯ ಇತರ ಹಿರಿಯ ನಾಯಕರ ‘ಜಾತಕ’ವನ್ನೂ ಕೇಳಿರುವುದಾಗಿ ಪ್ರದೀಪ್ ಈಶ್ವರ್ ಹೇಳಿದರು. “ಬಸನಗೌಡ ಪಾಟೀಲ್ ಯತ್ನಾಳ್ ಅವರ ಜಾತಕವನ್ನೂ ಕೇಳಿದ್ದೇನೆ. ಸಿ.ಟಿ. ರವಿ, ಆರ್. ಅಶೋಕ್ ಮತ್ತು ಬಿ.ವೈ. ವಿಜಯೇಂದ್ರ ಅವರನ್ನು ಸೈಡ್‌ಲೈನ್ ಮಾಡಿದರೆ ಮಾತ್ರ ಪಕ್ಷಕ್ಕೆ ಬರುವುದಾಗಿ ಯತ್ನಾಳ್ ಕಂಡೀಷನ್ ಹಾಕಿದ್ದಾರಂತೆ. ಇದೆಲ್ಲ ಜಾತಕ ಸಾರ್, ಅವರೇನು ಹೇಳಿಲ್ಲ,” ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರ ಬಗ್ಗೆಯೂ ಮಾತನಾಡಿದ ಅವರು, “ಪ್ರಲ್ಹಾದ್ ಜೋಷಿ ಅವರ ಜಾತಕದ ಪ್ರಕಾರ, ಇವರೆಲ್ಲರಿಗೂ ಚೆಕ್‌ಮೇಟ್ ಇಟ್ಟು, ರಾಜ್ಯ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ತೆರೆಮರೆಯಲ್ಲಿ (ಅಂಡರ್ ಕರೆಂಟ್) ಕೆಲಸ ಮಾಡುತ್ತಿದ್ದಾರೆ. ಇವರೆಲ್ಲ ಹೀಗೆ ಕಿತ್ತಾಡುತ್ತಿರುವಾಗ, ಬಿ.ಎಲ್. ಸಂತೋಷ್ ಅವರು ದೆಹಲಿಯಲ್ಲಿ ಸದ್ದಿಲ್ಲದೆ ತಮ್ಮ ಆಟ ಆಡುತ್ತಿದ್ದಾರೆ,” ಎಂದು ಬಿಜೆಪಿಯ ಆಂತರಿಕ ಅಧಿಕಾರ ರಾಜಕಾರಣದ ಚಿತ್ರಣವನ್ನು ಕಟ್ಟಿಕೊಟ್ಟರು.
ಬಿಜೆಪಿ ಮನೆ ಒಡೆದು ನೂರು ಬಾಗಿಲು
ಬಿಜೆಪಿಯ ಸ್ಥಿತಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರದೀಪ್ ಈಶ್ವರ್, “ಬಿಜೆಪಿಯ ಮನೆ ಬಾಗಿಲು ಸಂಪೂರ್ಣವಾಗಿ ಹೊಡೆದುಹೋಗಿದೆ. ಆ ಮನೆ ಈಗ ನೂರು ಬಾಗಿಲಾಗಿದೆ. ಇಷ್ಟೆಲ್ಲ ಜಾತಕ ತಿಳಿದುಕೊಳ್ಳುವ ಬದಲು, ಅಶೋಕಣ್ಣ ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಾರೆ. ನಮ್ಮಲ್ಲಿ ಹೈಕಮಾಂಡ್ ಇದೆ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿದ್ದಾರೆ. ಮೊದಲು ಅವರು ತಮ್ಮ ಮನೆಯನ್ನು ಸರಿಪಡಿಸಿಕೊಳ್ಳಲಿ,” ಎಂದು ಸವಾಲು ಹಾಕಿದರು.
ಒಟ್ಟಿನಲ್ಲಿ, ಪ್ರದೀಪ್ ಈಶ್ವರ್ ಅವರ ಈ ‘ಜ್ಯೋತಿಷ್ಯ’ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಬಿಜೆಪಿಯೊಳಗಿನ ಭಿನ್ನಮತ ಮತ್ತೊಮ್ಮೆ ಬೀದಿಗೆ ಬಂದಂತಾಗಿದೆ.








