ಕಾಂಗ್ರೆಸ್ ಸೇರಲು ನಿರಾಕರಿಸಿದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ …..
ಅಂತಿಮವಾಗಿ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಲು ನಿರಾಕರಿಸಿದ್ದಾರೆ. ಪ್ರಶಾಂತ್ ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹಗಳು ಕಳೆದ 15 ದಿನಗಳಿಂದಲೂ ಕೇಳಿ ಬರುತ್ತಿತ್ತು. ಇದಕ್ಕೆ ಸ್ವತಃ ಪ್ರಶಾಂತ್ ಅಂತ್ಯ ಹಾಡಿದ್ದು, ಕಾಂಗ್ರೆಸ್‌ಗೆ ಉತ್ತಮ ನಾಯಕತ್ವ ಮತ್ತು ಬೃಹತ್ ಬದಲಾವಣೆಯ ಅಗತ್ಯವಿದೆಯೇ ಹೊರತು ನನ್ನದಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಟ್ವೀಟ್ ಮಾಡಿ – ಕಾಂಗ್ರೆಸ್ ಅಧ್ಯಕ್ಷರು ಸಶಕ್ತ ಆಕ್ಷನ್ ಗ್ರೂಪ್ 2024 ಅನ್ನು ರಚಿಸಿ ಪ್ರಶಾಂತ್ ಕಿಶೋರ್ ಅವರನ್ನು ಗುಂಪಿಗೆ ಸೇರಲು ಆಹ್ವಾನಿಸಿದರು, ಆದರೆ ಅವರು ನಿರಾಕರಿಸಿದರು. ಪಕ್ಷಕ್ಕಾಗಿ ಅವರು ಮಾಡಿದ ಪ್ರಯತ್ನಗಳು ಮತ್ತು ಸಲಹೆಗಳನ್ನು ನಾವು ಪ್ರಶಂಸಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
ಸುರ್ಜೇವಾಲಾ ಹೇಳಿಕೆ ಬಳಿಕ ಪ್ರಶಾಂತ್ ಕಿಶೋರ್ ಸ್ವತಃ ತಾವು ಕಾಂಗ್ರೆಸ್ ಸೇರುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಪ್ರಶಾಂತ್ ಬರೆದಿದ್ದಾರೆ- ನಾನು EAG (ಎಂಪವರ್ಡ್ ಆಕ್ಷನ್ ಗ್ರೂಪ್) ಭಾಗವಾಗಲು ಕಾಂಗ್ರೆಸ್ನ ಪ್ರಸ್ತಾಪವನ್ನು ತಿರಸ್ಕರಿಸಿದ್ದೇನೆ, ನನ್ನ ಅಭಿಪ್ರಾಯದಲ್ಲಿ, ಪಕ್ಷದ ಆಂತರಿಕ ಸಮಸ್ಯೆಗಳನ್ನು ಸರಿಪಡಿಸಲು, ಕಾಂಗ್ರೆಸ್‌ಗೆ ನನಗಿಂತ ಹೆಚ್ಚಿನ ನಾಯಕತ್ವ ಮತ್ತು ಬಲವಾದ ಇಚ್ಛಾಶಕ್ತಿ ಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಸೇರಿದಂತೆ ಮತ್ತಿತರ ಕಾಂಗ್ರೆಸ್ ನಾಯಕರ ಜೊತೆಗೆ ಪ್ರಶಾಂತ್ ಕಿಶೋರ್ ಮಾತುಕತೆ ನಡೆಸಿದ್ದರು. ಹಲವು ಸುತ್ತಿನ ಮಾತುಕತೆಗಳ ನಂತರ ಪ್ರಶಾಂತ್ ಕಿಶೋರ್ ಕಾಂಗ್ರೆಸ್‍ಗೆ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿಹರಿದಾಡುತ್ತಿತ್ತು. ಆದರೆ ಇಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿ ಕಾಂಗ್ರೆಸ್‍ಗೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.