ಬೆಂಗಳೂರು: ಮಂಗಳವಾರ ನಡೆದ ವಿಧಾನಪರಿಷತ್ ವಿಶೇಷ ಅಧಿವೇಶನ ವೇಳೆ ನಡೆದ ಗಲಾಟೆ, ಸಭಾಪತಿ ಪೀಠದಲ್ಲಿ ಉಪಸಭಾಪತಿ ಕುಳಿತುಕೊಂಡಿದ್ದು ಹೇಗೆ, ಉಪಸಭಾಪತಿ ಕೂರಲು ಹೇಗೆ ಬಿಟ್ಟಿರಿ ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರ ನೀಡುವಂತೆ ವಿಧಾನಪರಿಷತ್ ಕಾರ್ಯದರ್ಶಿಗೆ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಶೋಕಾಸ್ ನೋಟಿಸ್‍ನಲ್ಲಿ ಏನಿದೆ..!
ನೋಟಿಸ್‍ಗೆ 48 ಗಂಟೆಯೊಳಗೆ ಉತ್ತರ ನೀಡಬೇಕು. ನಿಮ್ಮ ವರ್ತನೆ ವಿಧಾನಮಂಡಲದ ನೌಕರನಿಗೆ ತಕ್ಕದಲ್ಲದ ರೀತಿಯಲ್ಲಿದ್ದು, ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ನಿಯಮಬಾಹಿರವಾಗಿ, ಬೇಜವಾಬ್ದಾರಿ ಮತ್ತು ಕರ್ವವ್ಯ ನಿರ್ಲಕ್ಷ್ಯತನದ ನಡವಳಿಗೆ ಮತ್ತು ಅಧಿಕಾರಿ ವ್ಯಾಪ್ತಿ ಮೀರಿದ ತಮ್ಮ ಕಾರ್ಯನಿರ್ವಹಣೆಯ ವಿರುದ್ಧ ಕರ್ನಾಟಕ ನಾಗರಿಕ ಸೇವೆ ನಿಯಮಾವಳಿ ರೀತಿ ಕ್ರಮಕೈಗೊಳ್ಳಬಾರದೇಕೆ ಎಂಬ ಬಗ್ಗೆ ವಿವರಣೆಯೊಂದಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಡಿ.15ರಂದು ವಿಧಾನಪರಿಷತ್ ಸದನದಲ್ಲಿ ನಡೆದ ಅಹಿತಕರ ಘಟನೆ ಸಂಬಂಧ ಆಡಳಿತ ಪಕ್ಷದ ಸದಸ್ಯರು ಸಭಾಪತಿಯಾದ ನನ್ನ ಸದನ ಪ್ರವೆಶಕ್ಕೆ ನಿರ್ಬಂಧ ವಿಧಿಸಿರುವುದು ಸೇರಿದಂತೆ ಸದನದ ಕಾರ್ಯಕಲಾಪಗಳಿಗೆ ವ್ಯತಿರಿಕ್ತವಾಗಿ ನಿಯಮಾವಳಿಗಳನ್ನು ಗಾಳಿಗೆ ತೂರಿ ನಡೆದುಕೊಂಡ ಘಟನೆಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿ ವ್ಯಾಪಕ ಟೀಕೆಗೆ ಒಳಗಾಗಿದೆ. ಇದರಿಂದ ಶತಮಾನದ ಇತಿಹಾಸವುಳ್ಳ ವಿಧಾನಪರಿಷತ್ತಿನ ಗೌರವ, ಸಂಪ್ರದಾಯ ಹಾಗೂ ಪರಂಪರೆಗೆ ಮಂಗಳವಾರ ನಡೆದ ಘಟನೆಗಳಿಂದ ಧಕ್ಕೆಯಾಗಿದೆ.
ಸದನದಲ್ಲಿ ಪ್ರತ್ಯಕ್ಷದರ್ಶಿಯಾಗಿ ಉಪಸ್ಥಿತರಿದ್ದ ತಾವು ಸದನ ಪ್ರಾರಂಭದಿಂದ ನಾನು ಆಗಮಿಸಿ ಸದನ ಮುಂದೂಡುವವರೆಗೆ ನನ್ನ ಅನುಪಸ್ಥಿತಿಯಲ್ಲಿ ಹಾಗೂ ನನ್ನ ನಿರ್ಗಮನದ ನಂತರ ನಡೆದ ಘಟನೆಗಳ ಸಂಕ್ಷಿಪ್ತ ವರದಿಯನ್ನು ಕೂಡಲೇ ಸಲ್ಲಿಸಬೇಕು.
ಪರಿಷತ್ ಸಚಿವಾಲಯದ ಜಾಲತಾಣದಲ್ಲಿ ಪ್ರಕಟಿಸಿರುವ ದೃಶ್ಯಮಾಲಿಕೆಗಳನ್ನು ವೀಕ್ಷಿಸಿದಾಗ ಸದನದ ಕಾರ್ಯಕಲಾಪಗಳ ಸಂಪೂರ್ಣ ಆಡಳಿತದ ಜವಾಬ್ದಾರಿ ವಹಿಸಿದ್ದ ತಾವು ಕೋರಂ ಬೆಲ್ ಚಾಲನೆಯಲ್ಲಿದ್ದಾಗ್ಯೂ ನಿಯಮ ಬಾಹಿರವಾಗಿ ಉಪಸಭಾಪತಿಗಳು ಸಭಾಪತಿ ಪೀಠ ಅಲಂಕರಿಸಿರುವುದು, ಸದನ ಪ್ರವೇಶ ಮಾಡುವ ದ್ವಾರವನ್ನು ಮುಚ್ಚಿ ನನ್ನ ಪ್ರವೇಶಕ್ಕೆ ನಿರ್ಬಂಧಿಸಿರುವುದು, ನಿಯಮ ಬಾಹಿರವಾಗಿ ಪೀಠ ಅಲಂಕರಿಸಿದ್ದ ಉಪಸಭಾಪತಿಯವರಿಗೆ ಸರಿಯಾಗಿ ಮಾಹಿತಿ ನೀಡದೆ, ಸದನ ಮುಂದುವರೆಸುವ ಚಿತಾವಣೆ ರೀತಿ ತಾವು ದಾಖಲೆಗಳನ್ನು ನೀಡಿರುವುದು ಸೇರಿದಂತೆ ತಮ್ಮ ಕರ್ತವ್ಯಕ್ಕೆ ಸಾಕ್ಷಿಯಾಗಿರುವ ಹಲವು ಅಂಶಗಳನ್ನು ಗಮನಿಸಿದ್ದೇನೆ.
ಹೀಗೆ ಮೇಲಿನ ಅಂಶಗಳಿಗೆ ಉತ್ತರ ನೀಡುವಂತೆ ಸೂಚಿಸಿ ಕಾರ್ಯದರ್ಶಿಗೆ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ಶೋಕಾಸ್ ಜಾರಿ ಮಾಡಿದ್ದಾರೆ.
ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದ ಬಿಜೆಪಿ, ಕಲಾಪ ನಡೆಸಲು ಉಪ ಸಭಾಪತಿ ಧರ್ಮೇಗೌಡರನ್ನು ಸಭಾಪತಿ ಪೀಠದಲ್ಲಿ ಕೂರಿಸಿದ್ದರು. ಸಭಾಪತಿಯ ಅನುಮತಿ ಇಲ್ಲದೆ ಉಪ ಸಭಾಪತಿ ಆ ಪೀಠದಲ್ಲಿ ಕೂರುವಂತಿಲ್ಲ ಎಂದು ಕಾಂಗ್ರೆಸ್ ಸದಸ್ಯರು ಧರ್ಮೇಗೌಡರನ್ನು ಪೀಠದಿಂದ ಎಳೆದು, ಗ್ಲಾಸ್‍ನ್ನು ಪುಡಿಪುಡಿ ಮಾಡಿದ್ದರು.
ಸಭಾಪತಿ ಸದನದೊಳಗೆ ಬಾರದಂತೆ ಬಿಜೆಪಿ ಸದಸ್ಯರು ಬಾಗಿಲು ಹಾಕಿದ್ದರು. ಕಲಾಪದಲ್ಲೇ ಎರಡೂ ಪಕ್ಷದ ಸದಸ್ಯರು ಮೈಕೈ ಮುಟ್ಟಿಕೊಂಡು ಹೊಡೆದಾಡಿದ್ದರು. ಬಳಿಕ ಪ್ರಕರಣದ ಕುರಿತು ಮಧ್ಯ ಪ್ರವೇಶಿಸುವಂತೆ ಬಿಜೆಪಿ ನಿಯೋಗ ರಾಜ್ಯಪಾಲರಿಗೆ ದೂರು ಸಲ್ಲಿಸಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel