ಬೆಂಗಳೂರು: ಕೊರೊನಾ ಭೀತಿಯ ನಡುವೆಯೂ ಜೂ.25ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ಧ ದೂರು ನೀಡಲಾಗಿದೆ.
ಜನಾಧಿಕಾರ ಸಂಘರ್ಷ ಪರಿಷತ್ ಅಧ್ಯಕ್ಷ ಆದರ್ಶ ಅಯ್ಯರ್ ಎಂಬುವರು ಹಲಸೂರುಗೇಟ್ ಠಾಣೆಗೆ ದೂರು ನೀಡಿದ್ದಾರೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಇದರ ನಡುವೆಯೇ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಇದು ವಿದ್ಯಾರ್ಥಿಗಳ ಜೀವಕ್ಕೆ ಮಾರಕವಾಗಲಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಶಿಕ್ಷಣ ಸಚಿವ ಸುರೇಶ್‍ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 107, 304(ಉದ್ದೇಶಿತವಲ್ಲದ ಕೊಲೆ) ಅಡಿ ಪ್ರಕರಣ ದಾಖಲಿಸಿಕೊಳ್ಳಬೇಕು. ಒಂದು ವೇಳೆ ಎಫ್‍ಐಆರ್ ದಾಖಲಿಸಿಕೊಳ್ಳದೇ ಹೋದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಆದರ್ಶ ಅಯ್ಯರ್ ಹೇಳಿದ್ದಾರೆ.
ನೆರೆಯ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಎಸ್‍ಎಸ್‍ಎಸ್‍ಸಿ ಪರೀಕ್ಷೆಯನ್ನು ರದ್ದು ಮಾಡಿವೆ. ಆದರೆ, ಪರೀಕ್ಷೆ ನಡೆಸಬೇಕಾ ? ಬೇಡವೇ ಎಂದು ನಿರ್ಧರಿಸುವುದು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿ. ಆದರೆ, ಸಚಿವರೇ ಪರೀಕ್ಷೆ ನಡೆಸಲು ನಿರ್ಧಾರ ತೆಗೆದುಕೊಂಡಿರುವುದು ಕಾನೂನು ಬಾಹಿರ ಎಂದು ಆದರ್ಶ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ ವಾರವಷ್ಟೇ ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ದು ಮಾಡುವಂತೆ ಕೋರಿ ರಾಜ್ಯ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮೆಟ್ಟಿಲೇರಲಾಗಿತ್ತು. ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಕೂಡ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಹಸಿರು ನಿಶಾನೆ ನೀಡಿವೆ.
ನಿನ್ನೆಯಷ್ಟೇ ಬಾಕಿ ಇದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಯನ್ನು ಶಿಕ್ಷಣ ಇಲಾಖೆ ಮುಗಿಸಿದೆ. ನಿನ್ನೆಯ ಲೋಪದೋಷಗಳು ಪುನರಾವರ್ತನೆಯಾಗದಂತೆ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗುವುದು ಎಂದು ಸಚಿವ ಸುರೇಶ್‍ಕುಮಾರ್ ಹೇಳಿದ್ದಾರೆ. ಜೂ.25ರಿಂದ ನಡೆಯಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಈ ದೂರು ನೀಡಲಾಗಿದೆ.