ಬೆಂಗಳೂರು : ನಗರದ ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿರುವ ಪದಾಧಿಕಾರಿಗಳ ಸಭೆ ರಾಜ್ಯ ಬಿಜೆಪಿಯ ದಿಕ್ಕನ್ನೇ ಬದಲಿಸಲಿದೆಯಾ..? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿದೆ. ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ದಿನದಿಂದ ರಾಜ್ಯ ಬಿಜೆಪಿಯ ಅಂಗಳದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆಗಳು ತುಸು ಜೋರಾಗಿಯೇ ನಡೆಯುತ್ತಿವೆ.
ರಾಜ್ಯ ಬಿಜೆಪಿಯ ಮಾಸ್ ಲೀಡರ್, ಒಂಟಿ ಸಲಗ, ರಾಜಾಹುಲಿ, ಒನ್ ಮ್ಯಾನ್ ಆರ್ಮಿ, ಬಿ.ಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ಆ ಸ್ಥಾನದಲ್ಲಿ ಹೊಸ ನಾಯಕನನ್ನು ಬೆಳೆಸಲು ರಾಜ್ಯ ನಾಯಕರೂ ಸೇರಿದಂತೆ ದೆಹಲಿ ವರಿಷ್ಠರು ತಯಾರಿ ಆರಂಭಿಸಿದ್ದಾರೆ. ಇದರ ಭಾಗವಾಗಿ ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಪಕ್ಷದ ಪದಾಧಿಕಾರಿಗಳ ಸಭೆ ನಡೆಸುತ್ತಿದ್ದಾರೆ.
ಅಭಿಪ್ರಾಯ ಸಂಗ್ರಹ
ಇಂದಿನ ಸಭೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂತೋಷ್ ಅವರು, ಸಿಎಂ ಬದಲಾವಣೆ ಬಗ್ಗೆ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ವಿವಿಧ ವಿಭಾಗವಾರು ಪದಾಧಿಕಾರಿಗಳ ಜೊತೆ ಈ ಇರುವರು ಮಾತುಕತೆ ನಡೆಸುತ್ತಿದ್ದು, ಪರ್ಯಾಯ ಸಿಎಂ ಆಯ್ಕೆ ಇಂದೇ ಅಂತಿಮವಾಗಲಿದೆ ಎನ್ನುವ ಮಾತುಗಳು ಸಹ ಕೇಳಿಬಂದಿವೆ.
ಸಿಎಂ ರೇಸ್ ನಲ್ಲಿ ಮುರುಗೇಶ್ ನಿರಾಣಿ
ಸಿಎಂ ಬದಲಾವಣೆ ಮಾತು ಕೇಳಿಬಂದಾಗ ಈ ಹಿಂದೆ ಜೋಶಿ, ಸವದಿ, ಅಶೋಕ್ ಹೆಸರುಗಳು ಕೇಳಿಬರುತ್ತಿದ್ದವು. ಆದ್ರೆ ಇಂದಿನ ಸಭೆಯಲ್ಲಿ ಮುರುಗೇಶ್ ನಿರಾಣಿ ಅವರ ಹೆಸರು ಮುನ್ನೆಲೆಗೆ ಬಂದಿದೆ.
ಒಟ್ಟಾರೆ ಸಿಎಂ ಬದಲಾವಣೆ ವಿಚಾರ ರಾಜ್ಯ ಬಿಜೆಪಿಯಲ್ಲಿ ಮಿಂಚಿನ ಸಂಚಲನವನ್ನು ಸೃಷ್ಟಿ ಮಾಡಿದ್ದು, ಎಲ್ಲರ ಚಿತ್ತ ಇಂದಿನ ಸಭೆಯತ್ತ ನೆಟ್ಟಿದೆ.