ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ದಿನಾಚರಣೆಯ ದಿನವೇ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ದಿನ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 100 ರೂ. ಕಡಿತಗೊಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ದಿನಾಚರಣೆಯಂದು ದರ ಕಡಿಮೆ ಮಾಡಿದ್ದೇವೆ ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಮಹಿಳಾ ದಿನದಂದು ನಮ್ಮ ಸರ್ಕಾರವು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 100 ರೂ. ಇಳಿಕೆ ಮಾಡಿದೆ. ಇದು ದೇಶದಾದ್ಯಂತ ಲಕ್ಷಾಂತರ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ, ವಿಶೇಷವಾಗಿ ನಮ್ಮ ನಾರಿ ಶಕ್ತಿಗೆ ಪ್ರಯೋಜನ ನೀಡಲಿದೆ ಎಂದು ಬರೆದುಕೊಂಡಿದ್ದಾರೆ.
ಅಡುಗೆ ಅನಿಲವನ್ನು ಹೆಚ್ಚು ಕೈಗೆಟುಕುವಂತೆ ಮಾಡುವ ಮೂಲಕ ನಾವು ಕುಟುಂಬಗಳ ಯೋಗಕ್ಷೇಮ ಮತ್ತು ಆರೋಗ್ಯಕರ ವಾತಾವರಣವನ್ನು ಖಚಿತಪಡಿಸಿಕೊಳ್ಳುವ ಗುರಿ ಹೊಂದಿದ್ದೇವೆ. ಮಹಿಳೆಯರ ಸಬಲೀಕರಣ ಹಾಗೂ ಹೆಣ್ಣುಮಕ್ಕಳು ಸುಲಭವಾಗಿ ಜೀವನ ಸಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಪ್ರಯತ್ನವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.