ಹೊಸದಿಲ್ಲಿ, ಜೂನ್ 4: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿಕರಿಗೆ ಅನುಕೂಲವಾಗುವಂತೆ ಮತ್ತೊಂದು ಮಹತ್ವದ ತೀರ್ಮಾನ ಕೈಗೊಂಡಿದೆ. ಅಗತ್ಯವಸ್ತುಗಳ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತರಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಧಾನ್ಯ, ಈರುಳ್ಳಿ ಸಹಿತ ಹಲವು ಆಹಾರ ಪದಾರ್ಥಗಳ ಮೇಲಿನ ನಿಯಂತ್ರಣವನ್ನು ಕೈಬಿಡಲು ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರ ಆದಾಯ ಹೆಚ್ಚಳಕ್ಕೆ ಈ ತೀರ್ಮಾನ ನೆರವಾಗಲಿದೆ ಎಂದು ಹೇಳಲಾಗಿದೆ. ಒನ್ ನೇಷನ್ ಒನ್ ಮಾರ್ಕೆಟ್ ಯೋಜನೆಯನ್ನು ಜಾರಿಗೆ ತರುವ ಮೂಲಕ ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಲು ಸಹಾಯಕವಾಗಲಿದೆ.

ಇದರಿಂದ ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ವಸ್ತುಗಳನ್ನು ದಾಸ್ತಾನು ಮಾಡುವುದರಿಂದ ರೈತರು ಬೆಳೆದ ಬೆಳೆಗಳಿಗೆ ಬೇಡಿಕೆ ಹೆಚ್ಚಲಿದೆ. ಕೃಷಿ ಉತ್ಪನ್ನ ವ್ಯಾಪಾರ-ವಾಣಿಜ್ಯ ಸುಗ್ರೀವಾಜ್ಞೆಗೆ ಅನುಮತಿ ನೀಡಲಾಗಿದ್ದು, ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಮಾತ್ರವಲ್ಲದೆ ಇತರ ಕಡೆ ಕೂಡ ಮಾರಾಟ ಮಾಡಬಹುದು. ಕೃಷಿ ಉತ್ಪನ್ನಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ತೆಗೆದು ಹಾಕುವುದರಿಂದ ಇವುಗಳ ಮೇಲೆ ನಿಯಂತ್ರಣ ಇಲ್ಲದಂತಾಗಿ ಆರ್ಥಿಕ ಚಟುವಟಿಕೆ ಗರಿಗೆದರಬಹುದು ಎಂದು ಹೇಳಲಾಗಿದೆ.








