ಬೆಂಗಳೂರು: ದೇಶದಲ್ಲಿ ಲೋಕಸಭೆ ತಯಾರಿ ನಡೆಯುತ್ತಿದ್ದು, ಬಿಜೆಪಿಯು ಹಲವು ರಾಜ್ಯಗಳಲ್ಲಿ ಮೈತ್ರಿ ಮಾಡಿಕೊಂಡಿದ್ದು, ರಾಜ್ಯದಲ್ಲಿ ಕೂಡ ಜೆಡಿಎಸ್ ನೊಂದಿಗೆ ಕೈ ಜೋಡಿಸಿದೆ. ಹೀಗಾಗಿ ಹಲವು ಕ್ಷೇತ್ರಗಳ ನಾಯಕರ ಆತಂಕಕ್ಕೆ ಕಾರಣವಾಗುತ್ತಿದೆ.
ಮಂಡ್ಯ ಸಂಸದೆ ಸಮಲತಾ ಅಂಬರೀಶ್ ಅವರು ಪಕ್ಷೇತರರಾಗಿ ಸ್ಪರ್ಧಿಸಿ, ಬಿಜೆಪಿ ಸೇರಿದ್ದರು. ಆದರೆ, ಈಗ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಲಾಗಿದೆ ಎಂಬ ಸುದ್ದಿ ಹಬ್ಬಿದ್ದು, ಈ ಮಧ್ಯೆ ಹಾಲಿ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
ಈ ವೇಳೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಮುಂದಿನ ಅವಧಿಯಲ್ಲಿಯೂ ರಾಜ್ಯ ಮತ್ತು ರಾಷ್ಟ್ರದ ಸೇವೆಯಲ್ಲಿ ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಮಂಡ್ಯ ಕ್ಷೇತ್ರ ಯಾವ ಪಕ್ಷಕ್ಕೆ ಸೇರಲಿದೆ ಎಂಬುವುದು ಇದುವರೆಗೂ ಫೈನಲ್ ಆಗಿಲ್ಲ. ಸುಮಲತಾ ಅಂಬರೀಶ್ ಅವರು ನಾನು ಈ ಬಾರಿ ಕಣಕ್ಕೆ ಇಳಿಯುತ್ತೇನೆ ಎಂದು ಹೇಳಿದ್ದರು. ಮೋದಿ ಭೇಟಿಗೂ ಮೊದಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಭೇಟಿ ಮಾಡಿದ್ದರು. ಮಂಡ್ಯ ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮ ನಿರಂತರ ಕಾರ್ಯದೊತ್ತಡದ ನಡುವೆಯೂ ನನಗೆ ಸಮಯ ನೀಡಿದ್ದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ತಮ್ಮನ್ನು ಭೇಟಿ ಮಾಡಿದ ಸಂಧರ್ಭದಲ್ಲಿ ಪ್ರೋತ್ಸಾಹದಾಯಕ ಮಾತುಗಳು, ನಮ್ರತೆ, ಗೌರವಕ್ಕೆ ನಾನು ಕೃತಜ್ಞಳಾಗಿದ್ದೇನೆ. ತಮ್ಮನ್ನು ಭೇಟಿ ಮಾಡಿದ ಆ ಕ್ಷಣಗಳು ನನ್ನನ್ನು ಸಾರ್ವಜನಿಕರ ಸೇವೆಯಲ್ಲಿ ಇನ್ನಷ್ಟು ಉತ್ಸಾಹದಿಂದ ತೊಡಗಿಸಿಕೊಳ್ಳಲು ಸ್ಫೂರ್ತಿಯಾಗಿದ್ದು, ನಿಮ್ಮ ಸಹಕಾರ ಮತ್ತು ಮಾರ್ಗದರ್ಶನಕ್ಕೆ ನಾನು ಹೃದಯಪೂರ್ವಕವಾಗಿ ಆಭಾರಿ ಎಂದು ಬರೆದುಕೊಂಡಿದ್ದಾರೆ.