ಉತ್ತರಾಖಂಡಕ್ಕೆ ಹೊಸ ವರ್ಷದ ಉಡುಗೊರೆ, 17,000 ಕೋಟಿ ಯೋಜನೆಗೆ ಮೋದಿ ಉಡುಗೊರೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉತ್ತರಾಖಂಡದ ಹಲ್ದ್ವಾನಿಯಲ್ಲಿ 17,500 ಕೋಟಿಗೂ ಹೆಚ್ಚು ಮೊತ್ತದ 23 ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಉಧಮ್ ಸಿಂಗ್ ನಗರದಲ್ಲಿ ಪ್ರತಿಷ್ಠಿತ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಶಾಖೆಯನ್ನೂ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ಮಾಡಿದರು.
ಹಲ್ದ್ವಾನಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜಿಲ್ಲೆಯ ಜನರಿಗೆ ‘ಹೊಸ ವರ್ಷದ ಉಡುಗೊರೆ’ಯನ್ನು ಘೋಷಿಸಿದರು. ನೀರು, ಚರಂಡಿ, ರಸ್ತೆ, ವಾಹನ ನಿಲುಗಡೆ, ಬೀದಿ ದೀಪಗಳಿಗಾಗಿ ಹಲ್ದ್ವಾನಿಯ ಒಟ್ಟಾರೆ ಮೂಲಸೌಕರ್ಯ ಅಭಿವೃದ್ಧಿಗೆ 2,000 ಕೋಟಿ ಮೊತ್ತದ ಯೋಜನೆ ತರುತ್ತಿದ್ದೇವೆ ಎಂದರು.
ಪ್ರಧಾನಿಯವರು ಶಂಕುಸ್ಥಾಪನೆ ನೆರವೇರಿಸಿದ ಯೋಜನೆಗಳ ಪೈಕಿ ಸುಮಾರು 5,750 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಲಖ್ವಾರ್ ವಿವಿಧೋದ್ದೇಶ ಯೋಜನೆಯೂ ಸೇರಿದೆ. ಈ ಯೋಜನೆಯನ್ನು ಮೊದಲು 1976 ರಲ್ಲಿ ರೂಪಿಸಲಾಗಿತ್ತಾದರೂ ಹಲವು ವರ್ಷಗಳಿಂದ ಬಾಕಿ ಉಳಿದಿತ್ತು.
ಇದು 34,000 ಹೆಕ್ಟೇರ್ ಹೆಚ್ಚುವರಿ ಭೂಮಿಗೆ ನೀರಾವರಿ ಮಾಡಲು, 300 MW ಜಲವಿದ್ಯುತ್ ಉತ್ಪಾದಿಸಲು ಮತ್ತು ಉತ್ತರಾಖಂಡ, ಉತ್ತರ ಪ್ರದೇಶ, ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದ ಆರು ರಾಜ್ಯಗಳಿಗೆ ಕುಡಿಯುವ ನೀರನ್ನು ಪೂರೈಸುತ್ತದೆ.