ಮೈಸೂರು: ಇಲ್ಲಿಯ ಕೆಆರ್‌ಎಸ್ ರಸ್ತೆಗೆ (KRS Road) ಸಿಎಂ ಸಿದ್ದರಾಮಯ್ಯ (Siddaramaiah) ಹೆಸರು ಇಡುವ ವಿಚಾರ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್ ಈ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
1999 ರಿಂದ 2024ರ ವರೆಗಿನ ಎಲ್ಲ ಕಡತಗಳನ್ನು ಪರಿಶೀಲಿಸಲಾಗಿದ್ದು, ಎಲ್ಲಿಯೂ ಪ್ರಿನ್ಸಸ್ ಹೆಸರು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.ಮೈಸೂರಿನ ಕೆಆರ್‌ಎಸ್ ರಸ್ತೆಗೆ (Mysuru KRS Road) ಸಿದ್ದರಾಮಯ್ಯ ಅವರ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ನಿಯೋಗ ಸಭೆ ನಡೆಸಿತು. ಸಭೆಯಲ್ಲಿ ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್, ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ ವಿಜಯ್ ಕುಮಾರ್, ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್ ಸೇರಿದಂತೆ ಪಾಲಿಕೆ ಅಧಿಕಾರಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿರುವ ನಗರಪಾಲಿಕೆ ಆಯುಕ್ತ, 1999 ರಿಂದ 2024ರ ವರೆಗಿನ ಎಲ್ಲಾ ಕಡತ ಪರಿಶೀಲನೆ ನಡೆಸಲಾಗಿದೆ. ಎಲ್ಲಿಯೂ ಪ್ರಿನ್ಸಸ್ ಹೆಸರು ಇಲ್ಲ. ಆ ರಸ್ತೆಗೆ ಯಾವ ಹೆಸರೂ ಇಲ್ಲ. ಈಗ 1964 ರಿಂದ 1999ರ ವರೆಗಿನ ಕಡತಗಳನ್ನೂ ಪರಿಶೀಲನೆ ಮಾಡುತ್ತಿದ್ದೇವೆ. ಸದ್ಯದಲ್ಲೇ ಬಹುತೇಕ ಮುಕ್ತಾಯವಾಗಲಿದೆ ಎಂದಿದ್ದಾರೆ.
ಕೆಆರ್‌ಎಸ್ ರಸ್ತೆಗೆ ಅಧಿಕೃತವಾಗಿ ಯಾವ ಹೆಸರು ಇಲ್ಲ. ನಾವು ಮೈಸೂರು ಪಾಲಿಕೆಯ 9 ವಲಯಗಳ ಆಯುಕ್ತರಿಂದ ಮಾಹಿತಿ ಪಡೆದಿದ್ದೇನೆ. ಅವರು ಕೂಡ ಪ್ರಿನ್ಸಸ್ ಹೆಸರು ಇದೇ ಎಂಬುದಕ್ಕೆ ಯಾವ ಅಧಿಕೃತ ದಾಖಲೆ ಇಲ್ಲ ಎಂದಿದ್ದಾರೆ.








