ಸರ್ಕಾರಿ ಮನೆ ಖಾಲಿ ಮಾಡುವಂತೆ ಪ್ರಿಯಾಂಕಾಗೆ ನೋಟಿಸ್- ನೋಟಿಸ್ ಬಂದ ಬೆನ್ನಲ್ಲೇ ಬಾಕಿ ಚುಕ್ತಾ
ಹೊಸದಿಲ್ಲಿ, ಜುಲೈ 2: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ದೆಹಲಿಯ ಲೋಧಿ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಯನ್ನು ಆಗಸ್ಟ್ 1ರೊಳಗೆ ಖಾಲಿ ಮಾಡುವಂತೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಕೇಂದ್ರ ಸರ್ಕಾರ ಈ ಹಿಂದೆಯೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಮಕ್ಕಳಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿಗೆ ನೀಡಲಾಗಿದ್ದ ಎಸ್ಪಿಜಿ ಭದ್ರತೆಯನ್ನು ಹಿಂಪಡೆದು, ಅವರಿಗೆ ಝಡ್ ಪ್ಲಸ್ ಭದ್ರತೆಯನ್ನು ನೀಡಿತ್ತು. ಅವರಿಗೆ ಒದಗಿಸಲಾಗಿದ್ದ ಭದ್ರತೆಯನ್ನು ಝಡ್ ಪ್ಲಸ್ ಗೆ ಇಳಿಸಿ, ದೇಶದಾದ್ಯಂತ ಸಿಆರ್ಪಿಎಫ್ ಯೋಧರ ಭದ್ರತೆಯನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ.
ಇದೀಗ ಒಂದು ತಿಂಗಳ ಸಮಯಾವಕಾಶ ನೀಡಿ ನವದೆಹಲಿಯ ಲೋಧಿ ಎಸ್ಟೇಟ್ನ ನಂಬರ್ 35 ಸರ್ಕಾರಿ ನಿವಾಸ ಖಾಲಿ ಮಾಡುವಂತೆ ಸರ್ಕಾರ ಸೂಚಿಸಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಿಯಾಂಕಾ ಗಾಂಧಿಯವರಿಗೆ ನೋಟಿಸ್ ಅನ್ನು ಕಳಿಸಿದ್ದು, ಅದರಲ್ಲಿ ನಿಮಗೆ ನೀಡಲಾಗಿದ್ದ ಎಸ್.ಪಿಜಿ ಭದ್ರತೆಯನ್ನು ಹಿಂಪಡೆದು , ಝಡ್ ಪ್ಲಸ್ ಭದ್ರತೆ ನೀಡಲಾಗಿದೆ. ಆದ್ದರಿಂದ ನಿಯಮದ ಪ್ರಕಾರ ನಿಮಗೆ ಸರ್ಕಾರಿ ನಿವಾಸವನ್ನು ನೀಡಲು ಸಾಧ್ಯವಿಲ್ಲ. ಹಾಗಾಗಿ ಇಷ್ಟು ದಿನ ನಿಮಗೆ ನೀಡಲಾಗಿದ್ದ ಲೋಧಿ ಎಸ್ಟೇಟ್ನಲ್ಲಿರುವ ಮನೆ ಸಂಖ್ಯೆ 35 ಅನ್ನು ಹಿಂಪಡೆಯುತ್ತಿದ್ದು, ಆಗಸ್ಟ್ ಒಂದರ ಒಳಗೆ ಮನೆ ಖಾಲಿ ಮಾಡುವಂತೆ ಉಲ್ಲೇಖಿಸಲಾಗಿದೆ. ಆಗಸ್ಟ್ 1 ರ ಬಳಿಕವೂ ಮನೆ ಖಾಲಿ ಮಾಡದೆ ಇದ್ದ ಪಕ್ಷದಲ್ಲಿ ದಂಡ ವಿಧಿಸಲಾಗುವುದು ಎಂದೂ ಕೂಡ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರ ಸರ್ಕಾರ ನೋಟಿಸ್ ಕೊಟ್ಟ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬಾಕಿವುಳಿಸಿಕೊಂಡಿದ್ದ ಬಂಗ್ಲೆಯ ಬಾಡಿಗೆ ಮತ್ತಿತರ ಖರ್ಚುವೆಚ್ಚಗಳನ್ನು ಪಾವತಿಸಿದ್ದಾರೆ ಎಂದು ವರದಿಗಳು ಹೇಳಿವೆ. ನೋಟಿಸ್ ನ ಪ್ರಕಾರ ಆಗಸ್ಟ್ 1ರೊಳಗೆ ಪ್ರಿಯಾಂಕಾ ಗಾಂಧಿ ವಾದ್ರಾ ಲುಟಯೆನ್ಸ್ ಬಂಗ್ಲೆಯನ್ನು ತೆರವುಗೊಳಿಸದಿದ್ದರೆ ಅವರು ನಿಯಮಾನುಸಾರ ಜುಲ್ಮಾನೆ ರೂಪದಲ್ಲಿ ಹೆಚ್ಚುವರಿ ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ.