ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರ ವಿರುದ್ಧ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕರು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಪ್ರತಿಭಟನೆ ನಡೆಸಿದ್ದಾರೆ. ಸಾಮಾಜಿಕ ಅಂತರವನ್ನು ಮರೆತು ಕಾಂಗ್ರೆಸ್ ಮುಖಂಡರು ಜಾತ್ರೆಯಂತೆ ರಾಜ್ಯಪಾಲರಿಗೆ ದೂರು ನೀಡಲು ಹೋಗಿರುವುದು ಅವರ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುತ್ತದೆ.
ಕೈ ನಾಯಕರಿಗೆ ಸಾಮಾಜಿಕ ಕಳಕಳಿಗಿಂತ ಪ್ರಚಾರದ ಗೀಳು ಜಾಸ್ತಿಯಾಗಿದೆ. ತಾವು ಇರುವ ಕತ್ತಲೆಯನ್ನು ಅರಿಯದವರು ಎಂದಿಗೂ ಬೆಳಕಿಗಾಗಿ ಹುಡುಕುವುದಿಲ್ಲ ಎಂದು ಸುಧಾಕರ್ ಟ್ವಿಟರ್‍ನಲ್ಲಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.

ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಹೊರಟಿದೆ ಎಂದು ಆರೋಪಿಸಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ‘ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಕ್ಷಿಸಿ’ ಹೆಸರಿನಡಿ ಕಾಂಗ್ರೆಸ್ ನಾಯಕರು ಇಂದು ಪ್ರತಿಭಟನೆ ನಡೆಸಿದರು.
ಕೆಪಿಸಿಸಿ ಕಚೇರಿಯಿಂದ ಆರಂಭವಾದ ಪ್ರತಿಭಟನೆ ವೇಳೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಪ್ರತಿಭಟನೆ ವೇಳೆ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಗುಂಪು ಕಟ್ಟಿದ್ದಕ್ಕೆ ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.









