ರೈಲ್ವೆ ಹಳಿಯಲ್ಲಿ ಸಿಲುಕಿದ್ದ ನವಜಾತ ಜಿಂಕೆ ಮರಿ ರಕ್ಷಣೆ
ಕೋಲಾರ: ರೈಲ್ವೆ ಹಳಿಯಲ್ಲಿ ಸಿಲುಕಿದ್ದ ನವಜಾತ ಜಿಂಕೆ ಮರಿಯೊಂದನ್ನು ಸಾರ್ವಜನಿಕರು ಸುರಕ್ಷಿತವಾಗಿ ಸಂರಕ್ಷಿಸಿದ್ದಾರೆ.
ಕೋಲಾರ ನಗರದ ಆರ್ ಟಿಒ ಕಛೇರಿ ಹಿಂಬಾಗದಲ್ಲಿರುವ ರೈಲ್ವೆ ಹಳಿಗಳ ಮೇಲೆ ಈ ಪುಟ್ಟಾಣಿ ಜಿಂಕೆ ಮರಿ ಪತ್ತೆಯಾಗಿದ್ದು, ಯಾವುದೋ ಗಾಬರಿಯಲ್ಲಿ ಇದರ ತಾಯಿ ಜಿಂಕೆ ಮರಿ ಯನ್ನು ಬಿಟ್ಟು ಹೆದರಿ ಓಡಿ ಹೋಗಿದೆ.
ಸಮೀಪದ ಟೊಮ್ಯಾಟೋ ತೋಟದಲ್ಲಿ ಇಂದು ಮಧ್ಯಾಹ್ನ ಇಲ್ಲವೇ ಕಳೆದ ರಾತ್ರಿ ಈ ಮರಿ ಜನಿಸಿದ್ದು, ಗುಂಪಿನಿಂದ ಬೇರ್ಪಟ್ಟ ತಾಯಿ ಜಿಂಕೆ ಟೊಮ್ಯಾಟೋ ತೋಟದಲ್ಲಿ ಮರಿಗೆ ಜನ್ಮ ನೀಡಿರಬಹುದು.

ಇದು ತನ್ನ ಮೂಲ ಸ್ಥಾನಕ್ಕೆ ಹೋಗುವಾಗ ರೈಲ್ವೆ ಹಳಿಯನ್ನು ದಾಟಲಾಗದ ಮರಿ ಹಳಿಗಳ ಮದ್ಯೆ ಸಿಕ್ಕಿಕೊಂಡಿದೆ, ಆಗ ತಾಯಿ ಜಿಂಕೆಯೂ ಇದನ್ನು ಬಿಟ್ಟು ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ರೈಲು ಸಂಚಾರ ಸ್ಥಗಿತವಾಗಿರುವ ಕಾರಣ ಹಾಗೂ ಅದೃಷ್ಟವಶಾತ್ ನಾಯಿಗಳು ಈ ಕಡೆ ಬಾರದ ಕಾರಣ ನವ ಜಾತ ಜಿಂಕೆ ಮರಿ ಪ್ರಾಣಾಪಾಯದಿಂದ ಪಾರಾಗಿದೆ.
ಇಂದು ಸಂಜೆ ಈ ಬಾಗದ ನಿವಾಸಿಗಳು ರೈಲ್ವೆ ಹಳಿಯ ಬದಿಯಲ್ಲಿ ವಾಯು ಸಂಚಾರ ಮಾಡುವಾಗ ಈ ಮರಿ ಕಣ್ಣಿಗೆ ಬಿದ್ದಿದೆ, ಆಗ ಅಲ್ಲಿದ್ದ ಬೆಸ್ಕಾಂ ನೌಕರ ಸತೀಶ್ ಅವರು ಜಿಂಕೆ ಮರಿಯ ಪರಿಸ್ಥಿತಿಯ ಬಗ್ಗೆ ತಕ್ಷಣ ಪ್ರಾಣಿ ಪ್ರಿಯ ಸಿ.ಜಿ.ಮುರಳಿ ಅವರಿಗೆ ಕರೆ ಮಾಡಿ ತಿಳಿಸಿದರು.
ಆಗ ಮುರಳಿ ಅವರು ಜಿಂಕೆ ಮರಿಯನ್ನೂ ಸುರಕ್ಷಿತವಾಗಿ ಸಂರಕ್ಷಿಸುವಂತೆ ಹೇಳಿ ತಕ್ಷಣ ವನಪಾಲಕ ಲೋಕೇಶ್ ಅವರಿಗೆ ಈ ಬಗ್ಗೆ ಮಾಹಿತಿಯನ್ನು ರವಾನಿಸಿದರು.
ಆಗ ಅವರು ತಕ್ಷಣವೇ ಸ್ಥಳಕ್ಕೆ ತೆರಳಿ ಜನರಿಂದ ಸಂರಕ್ಷಿಸಲ್ಪಟ್ಟ ಜಿಂಕೆ ಮರಿಯನ್ನು ವಶಕ್ಕೆ ಪಡೆದು ಸೂಕ್ತ ಚಿಕಿತ್ಸೆ ಮತ್ತು ಆರೈಕೆಗೆ ಒಳಪಡಿಸಿದ್ದಾರೆ.








