ಕೋಲಾರ : ಎಪಿಎಂಸಿ ಮಾರುಕಟ್ಟೆಯ ಸೆಸ್ ಪಾವತಿಸುವುದಕ್ಕೆ ವಿರೋಧಿಸಿ, ಸಾಮಾಜಿಕ ಅಂತರ ಮರೆತು ಎಪಿಎಂಸಿ ವರ್ತಕರು ಗುಂಪುಗುಂಪಾಗಿ ಪ್ರತಿಭಟನೆ ಮಾಡುತ್ತಿರುವ ಘಟನೆ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದಿದೆ.
ಕೊರೋನಾ ಮಹಾ ಮಾರಿಯಿಂದಾಗಿ ಲಾಕ್ ಡೌನ್ ವಿಧಿಸಿದ್ದು ಕೃಷಿ ಉತ್ಪನ್ನಗಳ ಖರೀದಿಗಾಗಿ ವರ್ತಕರು ಸಮಿತಿಗೆ ಪಾವತಿಸುವ ಸೆಸ್ ಶುಲ್ಕವನ್ನು ಕಳೆದ ಎರಡು ತಿಂಗಳಿನಿಂದ ಎಪಿಎಂಸಿ ನಿಲ್ಲಿಸಿತ್ತು. ಇದೀಗ ಕೊರೋನಾ ಮುಂದುವರೆದಿದ್ದರೂ ಸೆಸ್ ಸಂಗ್ರಹಕ್ಕೆ ಮುಂದಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಈ ನಿಲುವಿಗೆ ವರ್ತಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೋವಿಡ್ ಸಮಸ್ಯೆ ಬಗೆಹರಿಯುವರೆಗೂ ಸೆಸ್ ಪಾವತಿಸಲು ಸಾಧ್ಯವಿಲ್ಲ ಎಂದು ಕೃಷಿ ಉತ್ಪನ್ನ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಧರಣಿ ಮಾಡುತ್ತಿದ್ದಾರೆ.
ಪ್ರತಿಭಟನೆಯಲ್ಲಿ ಕೋವಿಡ್ ನಿಯಮಗಳು ಉಲ್ಲಂಘನೆ ಮಾಡಿದ್ದು, ಸಮಾಜಿಕ ಅಂತರ ಪಾಲಿಸದೇ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಸದ್ಯ ಸ್ಥಳಕ್ಕೆ ಬಂದ ಮಾರುಕಟ್ಟೆ ಆಡಳಿತ ಅಧಿಕಾರಿಗಳು ಶೀಘ್ರದಲ್ಲಿಯೇ ವಿಚಾರ ಕುರಿತು ಅವಲೋಕನೆ ಮಾಡುವುದಾಗಿ ಹೇಳಿ ಹೋಗಿದ್ದಾರೆ. ಅದಾಗ್ಯೂ ಕೊರೋನಾ ನಿಯಮ ಉಲ್ಲಂಘನೆ ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತ ಈ ಹಿಂದೆಯೇ ಎಚ್ಚರಿಕೆ ಕೊಟ್ಟಿದ್ದರು.








