ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಹೋದರೆ, ಗರ್ಭಕೋಶ ಶಸ್ತ್ರ ಚಿಕಿತ್ಸೆ | ಸಿಎಂ ಮನೆಗೆ ಮಹಿಳೆಯರ ದಂಡು
ಹಾವೇರಿ: ಮಹಿಳೆಯರು ಹೊಟ್ಟೆ ನೋವು ಅಂತ ತಾಲೂಕು ಆಸ್ಪತ್ರೆಗೆ ಹೋದರೆ, ಗರ್ಭಕೋಶ ಶಸ್ತ್ರ ಚಿಕಿತ್ಸೆ ಮಾಡಿರುವ ಘಟನೆ ರಾಣೆಬೆನ್ನೂರಿನ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಡಾ.ಪಿ. ಶಾಂತ 1,522 ಮಹಿಳೆಯರಿಗೆ ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡಿದ್ದಾರಂತೆ. ಇದರಿಂದ ಮಹಿಳೆಯರಿಗೆ ಸಾಕಷ್ಟು ತೊಂದರೆಗಳಾಗುತ್ತಿದ್ದು, ಈ ಸಂಬಂಧ ತೊಂದರೆಗೆ ಸಿಲುಕಿದ ಮಹಿಳೆಯರು ಸರಕಾರ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುವಂತೆ ಮಹಿಳೆಯರು ಸಿಎಂ ಮನೆಗೆ ದಂಡು ಪಾದಯಾತ್ರೆ ಮಾಡುತ್ತಿದ್ದಾರೆ.
ಬಿಸಿಲು ಹೆಚ್ಚಾದರೆ ಮತ್ತು ರಾತ್ರಿಯಾದರೆ ಮಹಿಳೆಯರಿಗೆ ಕಣ್ಣಿನ ಸಮಸ್ಯೆ ಕಾಡುತ್ತದೆ. ಬಹುತೇಕ ಎಲ್ಲರೂ ಕೂಲಿ ಕೆಲಸವನ್ನೇ ನಂಬಿದವರಾಗಿದ್ದಾರೆ. ಹೀಗಾಗಿ ತಮಗೆ ವಿಶೇಷ ಆರ್ಥಿಕ ನೆರವು ನೀಡಡುವಂತೆ ಆಗ್ರಹಿಸಿ ಪಾದಯಾತ್ರೆ ಹೊರಟಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆ ಶಿಗ್ಗಾವಿಯಲ್ಲಿದ್ದು, ಹೀಗಾಗಿ ಸುಮಾರು 75 ಕಿ.ಮೀ ದೂರ ಪಾದಯಾತ್ರೆ ನಡೆಯುತ್ತಿದೆ. ನಿನ್ನೆಯಿಂದ ಪಾದಯಾತ್ರೆ ಪ್ರಾರಂಭವಾಗಿದೆ.
ಪ್ರತಿದಿನ 25 ಕಿ.ಮೀ ದೂರ ಮಹಿಳೆಯರು ನಡೆಯಲಿದ್ದು, ಬಿಸಿಲನ್ನೂ ಲೆಕ್ಕಿಸದೆ ತೆಲೆ ಮೇಲೆ ಬಟ್ಟೆ, ಊಟದ ಗಂಟು ಇಟ್ಟುಕೊಂಡು ಸಿಎಂ ಮನೆಗೆ ಮಹಿಳೆಯರ ದಂಡು ಪಾದಯಾತ್ರೆ ಹೊರಟಿದೆ. ಇಂದು ಎರಡನೇ ದಿನವಾಗಿದ್ದು, ಹಾವೇರಿ ತಾಲೂಕಿನ ತೋಟದಯಲ್ಲಾಪುರ ಗ್ರಾಮದ ಬಳಿ ಇರುವ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಬಳಿ ಪಾದಯಾತ್ರೆ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಹೆಚ್ಚುವರಿ ಎಸ್ ಪಿ ವಿಜಯಕುಮಾರ ಸೇರಿದಂತೆ ವಿವಿಧ ಅಧಿಕಾರಿಗಳ ತಂಡ ಭೇಟಿ ನೀಡಿದೆ. ಅಧಿಕಾರಿಗಳು ಮಹಿಳೆಯರ ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ.
ಈ ಮಹಿಳೆಯರಿಗೆ ಒಮ್ಮೆ ಅನುಕೂಲಕ್ಕೆ ಅಂತಾ 40 ಕೋಟಿ ಹಣವನ್ನು ಸರಕಾರ ಬಿಡುಗಡೆ ಮಾಡಿತ್ತಂತೆ. ಆಗ ತಾಆಲೂಕು ಮತ್ತು ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗರ್ಭಕೋಶ ಶಸ್ತ್ರಚಿಕಿತ್ಸೆ ಬಗ್ಗೆ ದೃಡೀಕರಣ ಪತ್ರ ಸಿಗದಿದಕ್ಕೆ ಹಣ ವಾಪಸ್ ಹೋಗಿದೆಯಂತೆ. ನಂತರ ಮಹಿಳೆಯರು ಹೋರಾಟದ ಮೂಲಕ ಗರ್ಭಕೋಶ ಶಸ್ತ್ರಚಿಕಿತ್ಸೆ ಆಗಿರುವ ಬಗ್ಗೆ ಆರೋಗ್ಯ ಇಲಾಖೆಯಿಂದ ದೃಡೀಕರಣ ಪತ್ರ ಪಡೆದುಕೊಂಡಿದ್ದಾರೆ. ಆದರೆ ಪರಿಹಾರ ಮಾತ್ರ ಸಿಕ್ಕಿಲ್ಲ.