PSI ಅಕ್ರಮ ಪ್ರಕರಣ – ಪ್ರಾಮಾಣಿಕ ಅಭ್ಯರ್ಥಿಗಳಿಂದ ರಕ್ತದಲ್ಲಿ ಪತ್ರ ಬರೆದು ಆಕ್ರೋಶ…
ರಾಜ್ಯದಲ್ಲಿ ನಡೆದ PSI ಪರೀಕ್ಷೆ ಅಕ್ರಮ ಅಲ್ಲೋಲ ಕಲ್ಲೋಲವನ್ನೇ ಎಬ್ಬಿಸಿದೆ. ಪಿಎಸ್ಐ ಪರೀಕ್ಷಾ ಹಗರಣದ ಪ್ರಮುಖ ಆರೋಪಿಗಳಾದ ದಿವ್ಯಾ ಹಾಗರಗಿ, ವೀರೇಶ್, ವೈಜನಾಥ್, ಮಂಜುನಾಥ್ ಮೇಳಕುಂದಿ ಇವರುಗಳ ವಿಚಾರಣೆ ನಡೆಯುತ್ತಿದೆ. ಇದುವರೆಗೂ 55ಕ್ಕೂ ಹೆಚ್ಚು ಮಂದಿಯನ್ನು ಅರೆಸ್ಟ್ ಮಾಡಿ ತನಿಖೆ ನಡೆಸಲಾಗುತ್ತಿದೆ.
ಇನ್ನೊಂದೆಡೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಅನ್ಯಾಯಕ್ಕೆ ಒಳಗಾಗಿರುವ ಅಭ್ಯರ್ಥಿಗಳ ಆಕ್ರೋಶದ ಕಟ್ಟೆ ಹೊಡೆಯುತ್ತಿದೆ. ಈ ಅನ್ಯಾಯ ಸರಿಪಡಿಸಬೇಕು ಅಂತ ಹೋರಾಟ ನಡೆಸುತ್ತಿದ್ದಾರೆ. ಆದರೆ ಇವರ ಮನವಿಗೆ ಸರ್ಕಾರ ಕ್ಯಾರೇ ಎಂದಿಲ್ಲ. ಇದೀಗ ಇದರಿಂದ ಆಕ್ರೋಶಗೊಂಡಿರುವ ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ರಕ್ತದಲ್ಲಿ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ರಕ್ತದಲ್ಲಿ ‘ಉಗ್ರ’ ಸಂದೇಶವೊಂದನ್ನು ಕಳಿಸಿದ್ದಾರೆ. ಈ ಪತ್ರಗಳೀಗ ವೈರಲ್ ಆಗುತ್ತಿವೆ.
ತಮ್ಮ ರಕ್ತದಲ್ಲಿ ಸುಮಾರು 2 ಪುಟಗಳ ಪತ್ರ ಬರೆದಿರುವ ಅಭ್ಯರ್ಥಿಗಳು, ತಮಗೆ ನ್ಯಾಯ ಒದಗಿಸಿಕೊಡುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ. ಪಿಎಸ್ಐ ಪರೀಕ್ಷೆಯ ಆಯ್ಕೆಯಲ್ಲಿ ಮೋಸ ಹೊದವರಿಗೆ ನ್ಯಾಯ ಸಿಗಬೇಕು, ಅನ್ಯಾಯ ಮಾಡಿದವರನ್ನ ಜೈಲಿಗೆ ಹಾಕಬೇಕು. ಆದರೆ ನಿಯತ್ತಿನಿಂದ, ಪ್ರಾಮಾಣಿಕವಾಗಿ ಬರೆದು ಪಾಸಾದವರಿಗೆ ಮೋಸವಾಗಬಾರದು. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಮಗೆ ಅಪಾರ ಗೌವರವಿದೆ, ಅವರು ಸೂಕ್ತ ತನಿಖೆಗೆ ಆದೇಶ ಮಾಡಿ, ನಮಗೆ ನ್ಯಾಯ ಕೋಡಿಸುತ್ತಾರೆ ಅನ್ನೋ ನಂಬಿಕೆ ಇದೆ ಅಂತ ಪತ್ರದಲ್ಲಿ ಬರೆಯಲಾಗಿದೆ.
ನ್ಯಾಯ ಸಿಗದಿದ್ದರೆ ಉಗ್ರರ ಜೊತೆ ಸೇರುತ್ತೇವೆ
“ಒಂದು ವೇಳೆ ನ್ಯಾಯಕೊಡಿಸದೇ ಹೋದ್ರೆ ನಾವು ಮುಂದೆ ಟೆರರಿಸ್ಟ್ ಗಳ ಕೈಜೋಡಿಸುತ್ತೇವೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳು ಹಣ ಇದ್ದವರಿಗೆ ಎನ್ನುವಂತ ವ್ಯವಸ್ಯೆ ಬಂದುಬಿಟ್ಟಿದೆ. ಸರ್ಕಾರದ ಈ ವ್ಯವಸ್ಥೆಯಿಂದ ನಾವು ಮಾನಸಿಕವಾಗಿ ಸತ್ತುಹೋಗಿದ್ದೇವೆ. ಆದ್ದರಿಂದ ಇನ್ನು ಮುಂದೆ ಸರ್ಕಾರಿ ಹುದ್ದೆ ಪರೀಕ್ಷೆಗಳನ್ನ ಬರೆಯುವುದಿಲ್ಲ. ಬದಲಾಗಿ ಟೆರೆರಿಸ್ಟ್ ಗಳ ಜೊತೆ ನಕ್ಸಲೈಟ್ ಸಂಘಟನೆ ಸೇರಲು ಇಚ್ಛಿಸಿದ್ದೇವೆ. ಅವರ ಬಳಿ ಹಣ ಪಡೆದ ಬಡ ಕುಟುಂಬಕ್ಕೆ ನಾವು ಸಹಾಯ ಮಾಡುತ್ತೇವೆ” ಅಂತ “ಉಗ್ರ” ಎಚ್ಚರಿಕೆ ನೀಡಿದ್ದಾರೆ.
ಸುಮಾರು 2 ಪುಟಗಳ ಪತ್ರವನ್ನು ರಕ್ತದಲ್ಲಿ ಬರೆಯಲಾಗಿದೆ. ಆದರೆ ಪತ್ರದಲ್ಲಿ ತಮ್ಮ ಹೆಸರನ್ನು ಅಭ್ಯರ್ಥಿಗಳು ನಮೂದಿಸಿಲ್ಲ. ನಾವು ಎಂಟು ಮಂದಿ ಇದ್ದೇವೆ, ನಾವೆಲ್ಲರು ಈ ನಿರ್ಧಾರ ಮಾಡಿದ್ದಾಗಿ ಪ್ರಧಾನಿಗೆ ಪತ್ರ ಬರೆದಿರೋ ನೋಂದ ಪಿಎಸ್ಐ ಅಭ್ಯರ್ಥಿಗಳು ಎಚ್ಚರಿಸಿದ್ದಾರೆ.
psi candidates wrote the letter to pm modi in blood








