PSI scam – 545 ಅಭ್ಯರ್ಥಿಗಳ ಆಯ್ಕೆ ಅನೂರ್ಜಿತ ಸರಿಯಲ್ಲ
ಬೆಂಗಳೂರು : ಪಿಎಸ್ಐ ನೇಮಕಾತಿಯಲ್ಲಿನ ಅಕ್ರಮಕ್ಕಾಗಿ ಎಲ್ಲ 545 ಅಭ್ಯರ್ಥಿಗಳ ಆಯ್ಕೆಯನ್ನು ಅನೂರ್ಜಿತಗೊಳಿಸಿರುವುದು ಸರಿಯಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಪಿಎಸ್ಐ ನೇಮಕಾತಿ ಪರೀಕ್ಷೆಯನ್ನು ಪ್ರಾಮಾಣಿಕವಾಗಿ ಬರೆದವರು ಧರಣಿ ನಡೆಸುತ್ತಿದ್ದಾರೆ. ಅವರನ್ನು ಸಿದ್ದರಾಮಯ್ಯ ಅವರು ಭೇಟಿ ಮಾಡಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಪಿಎಸ್ಐ ನೇಮಕಾತಿಯಲ್ಲಿನ ಅಕ್ರಮಕ್ಕಾಗಿ ಎಲ್ಲ 545 ಅಭ್ಯರ್ಥಿಗಳ ಆಯ್ಕೆಯನ್ನು ಅನೂರ್ಜಿತಗೊಳಿಸಿರುವುದು ಸರಿಯಲ್ಲ. ಇವರಲ್ಲಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಮಕ್ಕಳನ್ನು ಪ್ರತ್ಯೇಕವಾಗಿ ವಿಂಗಡಿಸಲು ಸಾಧ್ಯ ಇದೆ ಎಂದು ಡಿಜಿಪಿ ಹೇಳಿದ್ದಾರೆ. ಈ ಸಲಹೆಯನ್ನು ಬಿಜೆಪಿ ಸರ್ಕಾರ ಪರಿಶೀಲಿಸಬೇಕು.
ಕನಕಗಿರಿಯ ಪರಸಪ್ಪ ಎಂಬಾತ ಮಗನ ಉದ್ಯೋಗಕ್ಕಾಗಿ ಶಾಸಕ ಬಸವರಾಜ ದಡೆಸೂಗೂರು ಅವರಿಗೆ ರೂ. 15 ಲಕ್ಷ ನೀಡಿದ್ದೇನೆ ಎಂದು ಹೇಳಿದ್ದ ಅಡಿಯೋ ಮತ್ತು ವಿಡಿಯೋ ಲೀಕ್ ಆಗಿದೆ, ತಾವು ಪಡೆದ ಲಂಚದ ಹಣವನ್ನು ಬಿಜೆಪಿಸರ್ಕಾರಕ್ಕೆ ಕೊಟ್ಟಿದ್ದೇನೆಂದು ಶಾಸಕರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಜಿ ಮುಖ್ಯಮಂತ್ರಿಗಳ ಮಗ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ, ಅವರನ್ನು ಕರೆದು ಯಾಕೆ ವಿಚಾರಣೆ ಮಾಡಿಲ್ಲ ಬಿಜೆಪಿ ಶಾಸಕ ಪ್ರಿಯಾಂಕ ಖರ್ಗೆಯವರನ್ನು ಮಾತ್ರ ಮತ್ತೆ ಮತ್ತೆ ವಿಚಾರಣೆಗೆ ಕರೆದು ಪೊಲೀಸರು ಅವರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಪಿಎಸ್ಐ ನೇಮಕಾತಿ ಹಗರಣದ ಬಗ್ಗೆ ಪತ್ರಿಕಾಗೋಷ್ಠಿ ಮಾಡಿದ್ದ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ವಿಚಾರಣೆಗೆ ಬರುವಂತೆ ಪೊಲೀಸರು ಮೂರು ಬಾರಿ ನೋಟಿಸ್ ನೀಡಿದ್ದಾರೆ. ಅಕ್ರಮದ ಬಗ್ಗೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದ ಸಚಿವ ಪ್ರಭು ಚೌಹ್ಹಾಣ್ ಅವರನ್ನು ಯಾಕೆ ವಿಚಾರಣೆಗೊಳಪಡಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.