ಪರೀಕ್ಷಾ ಕೇಂದ್ರಗಳಿಗೆ ಹಿಜಾಬ್ ಧರಿಸಿ ಬರುವಂತಿಲ್ಲ – ಬಿ ಸಿ ನಾಗೇಶ್ ಸ್ಪಷ್ಟನೆ…
ಮಾರ್ಚ್ 9 ರಿಂದ ಆರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳಿಗೆ ಹಿಜಾಬ್ ಧರಿಸಿ ಬರುವಂತಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ತರಗತಿಯೊಳಗೆ ಹಿಜಾಬ್ ಧರಿಸುವುದಕ್ಕೆ ನಿಷೇಧ ಹೇರಿರುವ ರಾಜ್ಯ ಸರ್ಕಾರದ ಆದೇಶದ ವಿರುದ್ಧ ವಿದ್ಯಾರ್ಥಿನಿಯರ ಸಮೂಹ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ ಬರುವ ಪರೀಕ್ಷೆ ವೇಳೆ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಮನವಿ ಸಲ್ಲಿಸಿದ್ದರು. ಅದರ ವಿಚಾರಣೆಗೆ ತ್ರಿಸದಸ್ಯ ಪೀಠ ರಚಿಸಿ ಶೀಘ್ರದಲ್ಲೇ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದರ ಬೆನ್ನಲ್ಲೇ ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಾಗೇಶ್, ಮಾರ್ಚ್ 9ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದೆ. ಪರೀಕ್ಷಾ ಕೇಂದ್ರಗಳಿಗೆ ಹಿಜಾಬ್ ಧರಿಸುವುದಕ್ಕೆ ನಿರ್ಬಂಧಿಸಲಾಗಿದ್ದು, ಹಿಜಾಬ್ ಧರಿಸಿ ಬರುವವರಿಗೆ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ವಿವಿಧ ಜಿಲ್ಲೆಗಳಲ್ಲಿ ಕಾಲೇಜು ಪ್ರಾಂಶುಪಾಲರಿಗೆ ಮುಸ್ಲಿಂ ವಿದ್ಯಾರ್ಥಿನಿಯರು ಮನವಿ ಮಾಡಿದ್ದರು. ಆದರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪಿಯು ಕಾಲೇಜು ಪ್ರಾಂಶುಪಾಲರು ಮತ್ತು ಅಧಿಕಾರಿಗಳಿಗೆ ಇಂತಹ ಮನವಿಗಳನ್ನು ಪರಿಗಣಿಸದಂತೆ ಸೂಚನೆಗಳನ್ನು ನೀಡಿದೆ.
PUC Exam: Hijab is not allowed in examination centers – BC Nagesh clarifies…