puneeth raj kumar | ಅಪ್ಪುವಿಗೆ ನಮ್ಮ ಋಷಿಯ ಗೀತನಮನ
” ಅಪ್ಪು ಮಾಡಿದ ತಪ್ಪು ಏನು” ಹಾಡಿಗೆ ಧ್ವನಿಯಾದ ನಿರ್ಮಾಪಕ ಸೋಮಶೇಖರ್.
ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ಮರಣದ ನಂತರ ಇಡೀ ಕರುನಾಡಿಗೆ ಮಂಕುಬಡಿದ ಹಾಗೆ ಆಗಿದೆ. ಯಾರು ಕೂಡ ಆ ದುಃಖದಿಂದ ಹೊರಬರಲು ಆಗಿಲ್ಲ..
“ಒಳಿತು ಮಾಡು ಮನುಸ” ಹಾಡಿನ ಮೂಲಕ ಮನೆಮಾತಾಗಿರುವ ನಮ್ಮ ಋಷಿ ಅವರಿಗೂ ಪುನೀತ್ ಅವರ ಸಾವಿನ ನೋವು ಬಹಳವಾಗಿ ಕಾಡಿದೆಯಂತೆ. ಈ ನೋವನ್ನು ಅವರು “ಅಪ್ಪು ಮಾಡಿದ ತಪ್ಪು ಏನು” ಹಾಡು ಬರೆಯುವ ಮೂಲಕ ಹೊರಹಾಕಿದ್ದಾರೆ.
ನಮ್ಮ ಋಷಿ ಬರೆದಿರುವ ಈ ಹಾಡನ್ನು “ನಾ ಕೋಳಿಕೆ ರಂಗ” ಚಿತ್ರದ ನಿರ್ಮಾಪಕ ಸೋಮಶೇಖರ್ ಭಾವಪರವಶರಾಗಿ ಹಾಡಿದ್ದಾರೆ. ಇತ್ತೀಚೆಗೆ ಈ ವಿಡಿಯೋ ಸಾಂಗ್ ನ ಬಿಡುಗಡೆಯಾಯಿತು.
ನಾನು ಪುನೀತ್ ರಾಜಕುಮಾರ್ ಅವರನ್ನು ಬಾಲ್ಯದಿಂದಲೂ ಬಲ್ಲೆ. ವಯ್ಯಾಲಿ ಕಾವಲ್ ನಲ್ಲಿ ನಮ್ಮ ಮನೆಯಿತ್ತು. ಅಲ್ಲಿನ ಒಂದು ಬೇಕರಿಗೆ ಪುನೀತ್ ದಿಲ್ ಪಸಂದ್ ತಿನ್ನಲು ಸೈಕಲ್ ಮೇಲೆ ಬರುತ್ತಿದ್ದರು. ಆಗಿನಿಂದಲೂ ಕೊಡುವ ಗುಣ ಅವರಲ್ಲಿತ್ತು.. ತಾವು ತಿನ್ನುವುದಲ್ಲದೇ ಸುತ್ತ ಇರುವವರಿಗೂ ಕೊಡಿಸುತ್ತಿದ್ದರು. ಆನಂತರ ಜಿಮ್ ನಲ್ಲಿ ಅವರೊಂದಿಗೆ ಮಾತನಾಡಿತ್ತಿದೆ. ನನ್ನ “ಒಳಿತು ಮಾಡು ಮನುಸ” ಹಾಡನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದರು.
ಕಳೆದ ಇಪ್ಪತ್ತೊಂಭತ್ತನೇ ತಾರೀಖು ನನ್ನ ಸ್ನೇಹಿತರೊಬ್ಬರು ಅವರ ಸಾವಿನ ವಿಷಯ ತಿಳಿಸಿದಾಗ, ಅಂದಿನಿಂದ ಮಂಕಾಗಿ ಹೋದೆ. ನಿಜ ಹೇಳಬೇಕೆಂದರೆ ಅಂದಿನಿಂದ ನಾನು ಸ್ನಾನ ಮಾಡಿಲ್ಲ..ಊಟ ಕೂಡ ಸರಿಯಾಗಿ ಮಾಡಿಲ್ಲ.. ಸುಮಾರು ಕೆಜಿ ತೂಕ ಕೂಡ ಇಳಿದಿದೆ. ಆ ಸಮಯದಲ್ಲಿ ನನ್ನ ಸ್ನೇಹಿತ ಸೋಮಶೇಖರ್ ಅವರಿಗೆ ಫೋನ್ ಮಾಡಿ, ಈ ಹಾಡಿನ ಬಗ್ಗೆ ಹೇಳಿದೆ. ಅಪ್ಪು ಅವರ ಅಭಿಮಾನಿಯಾದ ಅವರು ಖಂಡಿತ ಈ ವಿಡಿಯೋ ಹಾಡನ್ನು ಮಡೋಣ ಎಂದರು. ಮೂರು ದಿನಗಳಲ್ಲಿ ಹಾಡು ತಯಾರಾಯಿತು. ಸೋಮಶೇಖರ್ ಅವರೆ ಹಾಡಿದ್ದಾರೆ. ಈ ಹಾಡನ್ನು ನಾವೇ ಬಿಡುಗಡೆ ಮಾಡಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಆಗಲೇ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಇದು ಅವರಿಗೆ ನನ್ನ ಗೀತನಮನ ಎಂದರು ನಮ್ಮ ಋಷಿ.
ನನ್ನ ನಿರ್ಮಾಣದ, ಮಾಸ್ಟರ್ ಆನಂದ್ ಅಭಿನಯದ “ನಾ ಕೋಳಿಕೆ ರಂಗ” ಚಿತ್ರದ ಹಾಡೊಂದನ್ನು ಪುನೀತ್ ಸರ್ ಹೇಳಿದ್ದರು. ನಾವು ಕೇಳಿದ ತಕ್ಷಣ ಹಾಡಲು ಒಪ್ಪಿಗೆ ಸೂಚಿಸಿದ ಅವರು, ದುಡ್ಡಿನ ವಿಷಯ ಪ್ರಸ್ತಾಪ ಮಾಡಲಿಲ್ಲ. ಆನಂದ್ ನನ್ನ ಗೆಳೆಯ. ಇದು ಗೆಳೆಯನ ಚಿತ್ರ ಎಂದರು. ಅಷ್ಟು ಸಹೃದಯಿ ಅವರು. ಪುನೀತ್ ಅವರ ನಿಧನ ನನಗೆ ತುಂಬಾ ನೋವುಂಟು ಮಾಡಿದೆ.
ಋಷಿ ಅವರು ಈ ಹಾಡಿನ ಬಗ್ಗೆ ಹೇಳಿದಾಗ, ನಾವೇ ಇದನ್ನು ವಿಡಿಯೋ ಸಾಂಗ್ ಮಾಡಿ ಬಿಡುಗಡೆ ಮಾಡೋಣ ಅಂದೆ. ಬೇರೆ ಗಾಯಕರ ಬಳಿ ಹೇಳಿಸೋಣ ಅಂದೆ. ನನ್ನ ಧ್ವನಿ ಈ ಹಾಡಿಗೆ ಸರಿ ಹೊಂದುತ್ತದೆ ಎಂದು, ಋಷಿ ಹಾಗೂ ಸಂಗೀತ ನಿರ್ದೇಶಕ ಶ್ರೀ ಗುರು ನೀವೇ ಹಾಡಿ ಅಂದರು.
ಪುನೀತ್ ಅವರ ಮೇಲಿನ ಅಭಿಮಾನ ನನ್ನನ್ನು ಹಾಡುವ ಹಾಗೆ ಮಾಡಿತು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದೇವೆ. ಮುಂದೆ ಪಿ.ಆರ್.ಕೆ ಆಡಿಯೋಗೆ ಈ ಹಾಡನ್ನು ಕೊಡುವ ಆಲೋಚನೆ ಇದೆ.ಈ ಹಾಡಿನಿಂದ ಬರುವ ಹಣವನ್ನು ಅವರು ನಡೆಸುತ್ತಿದ್ದ, ಸತ್ಕಾರ್ಯಗಳಿಗೆ ಬಳಸಿಕೊಳ್ಳುವಂತೆ ವಿನಂತಿಸುತ್ತೇವೆ ಎಂದರು ನಿರ್ಮಾಪಕ ಹಾಗೂ ಗಾಯಕ ಸೋಮಶೇಖರ್ ಎಸ್ ಟಿ.