ಕ್ಲಾಸ್ನಲ್ಲಿ ಕನ್ನಡದಲ್ಲಿ ಉತ್ತರ ನೀಡಿದರು ಎಂಬ ಕಾರಣಕ್ಕೆ ಬೆಂಗಳೂರಿನ ಪ್ರತಿಷ್ಠಿತ R.V. ಪಿಯು ಲರ್ನಿಂಗ್ ಹಬ್‌ನ ಉಪನ್ಯಾಸಕ ರೂಪೇಶ್ ಪುತ್ತೂರು ಅವರನ್ನು ವಜಾಗೊಳಿಸಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ, R.V. ಶಿಕ್ಷಣ ಸಂಸ್ಥೆ ಮಂಡಳಿ ಎಚ್ಚೆತ್ತುಕೊಂಡಿದೆ. ಈ ಅನ್ಯಾಯದ ಕ್ರಮಕ್ಕೆ ಕನ್ನಡಿಗರು ಮತ್ತು ಕನ್ನಡಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಕಾಲೇಜು ತನ್ನ ನಿರ್ಧಾರವನ್ನು ಹಿಂಪಡೆದಿದ್ದು, ಉಪನ್ಯಾಸಕರಿಗೆ ಮತ್ತೆ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದೆ.
ಘಟನೆ ಮತ್ತು ವಿವಾದದ ಕಿಡಿ:
ರಸಾಯನಶಾಸ್ತ್ರ ಪಾಠ ಮಾಡುತ್ತಿದ್ದ ಉಪನ್ಯಾಸಕ ರೂಪೇಶ್ ಪುತ್ತೂರು ಅವರು, ವಿದ್ಯಾರ್ಥಿಯೊಬ್ಬಳು ಕನ್ನಡದಲ್ಲಿ ಕೇಳಿದ ಪ್ರಶ್ನೆಗೆ ಕನ್ನಡದಲ್ಲೇ ಉತ್ತರಿಸಿದ್ದರು. ಆಗ ಮತ್ತೊಬ್ಬ ವಿದ್ಯಾರ್ಥಿನಿ “ಇದು ಇಂಗ್ಲಿಷ್ ಮೀಡಿಯಂ, ಇಂಗ್ಲಿಷ್‌ನಲ್ಲಿ ಮಾತನಾಡಿ” ಎಂದು ಆಕ್ಷೇಪಿಸಿದ್ದಾಳೆ. ಇದಕ್ಕೆ ಉಪನ್ಯಾಸಕರು “ಕನ್ನಡ ಯಾವುದೇ ಕ್ರಿಮಿನಲ್ ಲ್ಯಾಂಗ್ವೇಜ್ ಅಲ್ಲ, ಅದು ನಮ್ಮ ಮಣ್ಣಿನ ಭಾಷೆ” ಎಂದು ಉತ್ತರ ನೀಡಿದ್ದಾರೆ. ಈ ಘಟನೆಯ ನಂತರ, ಕಾಲೇಜು ಆಡಳಿತ ಮಂಡಳಿ ಉಪನ್ಯಾಸಕ ರೂಪೇಶ್ ಅವರಿಂದ ರಾಜೀನಾಮೆ ಪಡೆದಿತ್ತು. ತಮ್ಮ ಅಳಲನ್ನು ತೋಡಿಕೊಂಡ ಉಪನ್ಯಾಸಕ ರೂಪೇಶ್ ಅವರು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಕನ್ನಡಪರ ಹೋರಾಟಗಾರರು ಮತ್ತು ಕನ್ನಡಿಗರಿಂದ ತೀವ್ರ ಖಂಡನೆ ವ್ಯಕ್ತವಾಯಿತು.
ಕನ್ನಡಿಗರ ಹೋರಾಟ ಮತ್ತು ಫಲಿತಾಂಶ:
ಉಪನ್ಯಾಸಕರ ವಜಾಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಉಪನ್ಯಾಸಕರ ಬೆಂಬಲಕ್ಕೆ ನಿಂತರು. ಲಾಲ್ ಬಾಗ್ ಬಳಿ ಇರುವ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಕಚೇರಿಗೆ ಭೇಟಿ ನೀಡಿ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದರು. ಕನ್ನಡಿಗರಿಗೆ ಆದ ಈ ಅನ್ಯಾಯವನ್ನು ಪ್ರಶ್ನಿಸಿದರು.
ಕನ್ನಡಿಗರ ವ್ಯಾಪಕ ಪ್ರತಿಭಟನೆ ಮತ್ತು ರೂಪೇಶ್ ರಾಜಣ್ಣ ಅವರ ಮಧ್ಯಸ್ಥಿಕೆಯ ನಂತರ, R.V. ಪಿಯು ಲರ್ನಿಂಗ್ ಹಬ್‌ನ ಪ್ರಿನ್ಸಿಪಾಲ್ ಕ್ಷಮೆಯಾಚಿಸಿದ್ದು, ಉಪನ್ಯಾಸಕ ರೂಪೇಶ್ ಅವರ ರಾಜೀನಾಮೆಯನ್ನು ವಾಪಸ್ ಪಡೆದುಕೊಂಡಿದ್ದಾರೆ. ಜಂಟಿ ಕಾರ್ಯದರ್ಶಿ ನಾಗರಾಜ್ ಅವರು, ಈ ವಿಷಯ ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದಿದ್ದು, “ನನಗೂ ಕನ್ನಡದ ಬಗ್ಗೆ ವಿಶ್ವಾಸ ಇದೆ. ಇದು ಸಹ ಕನ್ನಡದ ಸಂಸ್ಥೆ. ಮಕ್ಕಳಿಗೆ ಈ ಬಗ್ಗೆ ಕೌನ್ಸಿಲಿಂಗ್ ಕೈಗೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.
ಕನ್ನಡಿಗರ ಸ್ವಾಭಿಮಾನದ ಗೆಲುವು:
ಈ ಘಟನೆ “ಕರ್ನಾಟಕದಲ್ಲಿ ಕನ್ನಡ ಮಾತಾಡೋದೇ ತಪ್ಪಾ? ಅಥವಾ ಕನ್ನಡಿಗರು ಕರ್ನಾಟಕದಲ್ಲಿ ಇರೋದೇ ತಪ್ಪಾ?” ಎಂಬಂತಹ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಆದರೆ, ಕನ್ನಡಿಗರ ಐಕ್ಯತೆ ಮತ್ತು ಕನ್ನಡಪರ ಹೋರಾಟದ ಫಲವಾಗಿ, ಕನ್ನಡ ಭಾಷೆಗೆ ಅಪಮಾನ ಮಾಡಿದವರಿಗೆ ತಕ್ಕ ಪಾಠ ಕಲಿಸಿದಂತಾಗಿದೆ. ಇದು ಕೇವಲ ಒಬ್ಬ ಉಪನ್ಯಾಸಕನಿಗೆ ಕೆಲಸ ಮರಳಿ ಸಿಕ್ಕ ಘಟನೆಯಾಗಿರದೆ, ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯ ಉಳಿವು ಮತ್ತು ಗೌರವಕ್ಕೆ ಕನ್ನಡಿಗರು ನೀಡಿದ ದಿಟ್ಟ ಸಂದೇಶವಾಗಿದೆ.