ದಾವಣಗೆರೆ: ಚಿಕನ್ ಸಾರ್ (Chicken) ಗಾಗಿ ಪತ್ನಿ ಕೊಲೆ ಮಾಡಿದವನಿಗೆ ಜೈಲು ಶಿಕ್ಷೆ ವಿಧಿಸಿರುವ ಘಟನೆ ನಡೆದಿದೆ.
ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ ಮಾಗನಹಳ್ಳಿ ಕೆಂಚಪ್ಪ ಕೊಲೆ ಮಾಡಿದ ಆರೋಪಿಯಾಗಿದ್ದ. ಈತನಿಗೆ ದಾವಣಗೆರೆ (Davanagere) 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 6 ವರ್ಷ ಜೈಲು (Jail) ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.
2022ರ ಜೂನ್ ನಲ್ಲಿ ಕೆಂಚಪ್ಪ ಕಂಠಪೂರ್ತಿ ಕುಡಿದು ಚಿಕನ್ ಸಾಂಬಾರು ಮಾಡಿಲ್ಲ ಎಂದು ಪತ್ನಿ ಶೀಲಾ ಅವರೊಂದಿಗೆ ಜಗಳವಾಡಿದ್ದಾನೆ. ಇದು ವಿಕೋಪಕ್ಕೆ ಹೋಗುತ್ತಿದ್ದಂತೆ ಚಾಕುವಿನಿಂದ ಎಡಭುಜಕ್ಕೆ ಚುಚ್ಚಿ ಕೊಲೆ ಮಾಡಿದ್ದ ಎನ್ನಲಾಗಿದೆ. ಈ ಕುರಿತು ಶೀಲಾ ತಾಯಿ ಉಕ್ಕಡಗಾತ್ರಿ ಗುತ್ಯಮ್ಮ ಹರಿಹರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ತನಿಖೆ ಕೈಗೊಂಡಿದ್ದ ತನಿಖಾಧಿಕಾರಿ ಸಿಪಿಐ ಸತೀಶ್, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜೆ.ವಿ.ವಿಜಯಾನಂದ ಶಿಕ್ಷೆ ವಿಧಿಸಿದ್ದಾರೆ.