ಬೆಂಗಳೂರು : ನಗರದ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಅಮಾಯಕರನ್ನು ಬಂದಿಸಿದ್ದರೇ ಅವರನ್ನು ಬಿಟ್ಟುಬಿಡಿ ಎಂದು ಶಾಸಜ ಅಖಂಡ ಶ್ರೀನಿವಾಸ ಮೂರ್ತಿ ಅವರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಇಂದು ಶಾಸಕರು, ಡಿ.ಜೆ ಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ಪ್ರಕರಣದಲ್ಲಿ ತಪ್ಪಿತಸ್ಥ ಆರೋಪಿಗಳನ್ನು ಹೊರತುಪಡಿಸಿ ಅಮಾಯಕರನ್ನು ಬಿಡುವಂತೆ ಪೊಲೀಸರಿಗೆ ಮನವಿ ಮಾಡಿದ್ದೇನೆ. ಸೆರೆ ಸಿಕ್ಕ ವಿಡಿಯೋಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿರುವುದು ಸ್ವಾಗತಾರ್ಹ. ಆದರೆ ತನಿಖೆ ವೇಳೆ ಇವರು ಆರೋಪಿಗಳಲ್ಲ, ಅಮಾಯಕರು ಎಂದು ಕಂಡು ಬಂದರೆ ಬಿಡಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.
ನಾನು ಜವಾಬ್ದಾರಿ ಇರುವ ಶಾಸಕ. ಅಮಾಯಕರ ಕುಟುಂಬಸ್ಥರ ಅಳಲು ಕೇಳಬೇಕಾಗಿರುವುದು ನನ್ನ ಕರ್ತವ್ಯ. ಹೀಗಾಗಿ ಅವರ ಪರವಾಗಿ ಠಾಣೆಗೆ ಬಂದಿದ್ದೇನೆ. ಅಮಾಯಕರನ್ನು ಬಿಡುವ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುತ್ತಿಲ್ಲ. ಸುಟ್ಟಿರುವುದು ನನ್ನ ಮನೆ, ನಷ್ಟವಾಗಿರುವುದು ನನಗೆ. ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲಿ ಎಂದು ತಿಳಿಸಿದರು.