ನೋಂದಣಿ ವ್ಯವಸ್ಥೆಯಲ್ಲಿ ಪಾರದರ್ಶಕತೆ – ಕಾವೇರಿ 2.0 ತಂತ್ರಾಂಶ ಪ್ರಾಯೋಗಿಕ ಜಾರಿ…
ನೋಂದಣಿ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ನವೀನ, ನಾಗರಿಕ ಸ್ನೇಹಿ, ವಂಚನೆ ರಹಿತ “ಕಾವೇರಿ – 2.0” ತಂತ್ರಾಂಶವನ್ನ ಅಭಿವೃದ್ಧಿಪಡಿಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ ಬೆಂಗಳೂರಿನಲ್ಲಿಂದು ಹೇಳಿದ್ದಾರೆ. ಪ್ರಾಯೋಗಿಕವಾಗಿ ಕಲಬುರಗಿ ಜಿಲ್ಲೆಯ ಚಿಂಚೋಳಿ ಮತ್ತು ಬೆಳಗಾವಿ ದಕ್ಷಿಣ ಉಪನೋಂದಣಿ ಕಚೇರಿಗಳಲ್ಲಿ ‘ಕಾವೇರಿ-2.0’ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಾಗರಿಕರು ನೋಂದಣಿ ಕಚೇರಿಗೆ ಹಾಜರಾಗುವ ಮೊದಲು ಎಲ್ಲ ದಾಖಲಾತಿಗಳನ್ನು ಆನ್‌ಲೈನ್ ನಲ್ಲಿ ಅಪ್‌ಲೋಡ್ ಮಾಡಿ ಉಪನೋಂದಣಾಧಿಕಾರಿಗಳ ಪರಿಶೀಲನೆಗೆ ಕಳುಹಿಸಿಕೊಡಲಾಗುತ್ತದೆ. ನಾಗರಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ನೋಂದಣಿ ಪ್ರಕ್ರಿಯೆಯ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಈ ನೋಂದಣಿ ಅವಧಿ ಹತ್ತು ನಿಮಿಷಗಳ ಸಮಯವಕಾಶ ತೆಗೆದುಕೊಳ್ಳಲಿದ್ದು ಭಾವಚಿತ್ರ, ಹೆಬ್ಬೆರಳಿನ ಗುರುತು ಸೆರೆಯುಡಿಯುವ ಸಂಬಂಧ ನಿಗದಿತ ದಿನಾಂಕ ಮತ್ತು ಸಮಯದಂದು ಕಚೇರಿಗೆ ಹಾಜರಾಗಬೇಕಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಡಿಜಿಟಲ್ ಸಹಿ ಮಾಡಿರುವ ದಸ್ತಾವೇಜಿನ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ಖಾತೆ ಬದಲಾವಣೆಗೆ ಕಳುಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.
‘ಕಾವೇರಿ 2.0’ ತಂತ್ರಾಂಶದಿಂದ ಉಪನೋಂದಣಿ ಕಚೇರಿಗಳಲ್ಲಿ ಸಾರ್ವಜನಿಕರು ಕಾಯುವ ಸಮಯ ತಪ್ಪಲಿದೆ. ಈ ಮೂಲಕ ತಡೆರಹಿತ ಸೇವೆಗೆ ಕೇಂದ್ರ ಕಚೇರಿ ಹಾಗೂ ಜಿಲ್ಲಾ ನೋಂದಣಿ ಕಚೇರಿಗಳಲ್ಲಿ ತಂತ್ರಾಂಶವನ್ನು ಅಳವಡಿಸಲಾಗುವುದು. ಕಾವೇರಿ 2.0’ ತಂತ್ರಾಂಶದ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಕುಂದುಕೊರತೆ ದಾಖಲಿಸಲು ಕಾಲ್‌ಸೆಂಟರ್ ಆರಂಭಿಸಲಾಗಿದೆ ಎಂದು ಕಂದಾಯ ಸಚಿವರು ತಿಳಿಸಿದ್ದಾರೆ.
R Ashok : Transparency in registration system – Cauvery 2.0 software pilot implementation…