ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ, ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಅವರ ಜನ್ಮದಿನದ ಸಂಭ್ರಮ ಈ ಬಾರಿ ರಾಜರಾಜೇಶ್ವರಿನಗರದಲ್ಲಿ ಮುಗಿಲು ಮುಟ್ಟಿತ್ತು. ಅಕ್ಟೋಬರ್ 3 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನೆಚ್ಚಿನ ನಟಿಯನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು ಮಧ್ಯರಾತ್ರಿಯಿಂದಲೇ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನ ಆರ್.ಆರ್. ನಗರದಲ್ಲಿರುವ ರಚಿತಾ ರಾಮ್ ನಿವಾಸದ ಸುತ್ತಮುತ್ತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಮೇಲಿನ ಅಭಿಮಾನ ಮೆರೆಯಲು ಆರ್.ಆರ್. ನಗರದ ಪ್ರವೇಶ ದ್ವಾರದಲ್ಲಿ ಬೃಹತ್ ಕಟೌಟ್ ಸೇರಿದಂತೆ, ಅವರು ಈವರೆಗೆ ನಟಿಸಿರುವ ಪ್ರಮುಖ ಪಾತ್ರಗಳ ಸಾಲು ಸಾಲು ಕಟೌಟ್‌ಗಳನ್ನು ರಸ್ತೆಯುದ್ದಕ್ಕೂ ನಿಲ್ಲಿಸಿದ್ದರು. ಈ ಕಟೌಟ್‌ಗಳಿಗೆ ಬೃಹತ್ ಹೂವಿನ ಹಾರಗಳನ್ನು ಹಾಕಿ, ದೃಷ್ಟಿ ತಾಗದಿರಲಿ ಎಂದು ಕುಂಬಳಕಾಯಿ ಒಡೆದು ವಿಶೇಷವಾಗಿ ಸಂಭ್ರಮಿಸಿದರು.
ಮಧ್ಯರಾತ್ರಿ ಮನೆ ಎದುರು ಜಮಾಯಿಸಿದ್ದ ಅಭಿಮಾನಿಗಳ ಸಮ್ಮುಖದಲ್ಲೇ ನಟಿ ರಚಿತಾ ರಾಮ್ ಕೇಕ್ ಕತ್ತರಿಸಿದರು. ಇದೇ ವೇಳೆ ಖ್ಯಾತ ಗಾಯಕ ಸುನಿಲ್ ಅವರು ನಟಿಗಾಗಿ ವಿಶೇಷವಾಗಿ ರಚಿಸಿ ರಾಗ ಸಂಯೋಜಿಸಿದ್ದ ‘ರಚ್ಚು ಅಚ್ಚು ಮೆಚ್ಚು…’ ಎಂಬ ಹಾಡನ್ನು ರಚಿತಾ ಅವರ ಸಮ್ಮುಖದಲ್ಲೇ ಲೈವ್ ಆಗಿ ಹಾಡಿ ಶುಭಕೋರಿದರು. ತಮ್ಮ ನೆಚ್ಚಿನ ತಾರೆಯನ್ನು ಬಣ್ಣಿಸುವ ಈ ಸುಂದರ ಗೀತೆಯನ್ನು ಕೇಳಿ ಸ್ವತಃ ರಚಿತಾ ರಾಮ್ ಹಾಗೂ ನೆರೆದಿದ್ದ ನೂರಾರು ಅಭಿಮಾನಿಗಳು ಪುಳಕಿತರಾದರು.
ಅಭಿಮಾನಿಗಳು ತೋರಿದ ಅಪ್ರತಿಮ ಪ್ರೀತಿ ಮತ್ತು ಅಭಿಮಾನದ ಮಹಾಪೂರವನ್ನು ಕಂಡು ರಚಿತಾ ರಾಮ್ ಅತ್ಯಂತ ಭಾವುಕರಾದರು. ಈ ವೇಳೆ ಭಾವುಕರಾಗಿಯೇ ಮಾತನಾಡಿದ ಅವರು, “ಪ್ರತಿ ವರ್ಷವೂ ಅಭಿಮಾನಿಗಳು ತೋರುವ ಈ ಪ್ರೀತಿ, ಬೆಂಬಲವೇ ನನ್ನ ಶಕ್ತಿ. ಈ ಪ್ರೀತಿಗೆ ನಾನು ಸದಾ ಋಣಿ” ಎಂದು ಕೃತಜ್ಞತೆ ಸಲ್ಲಿಸಿದರು. ಬಳಿಕ ನೆರೆದಿದ್ದ ಎಲ್ಲ ಅಭಿಮಾನಿಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಅವರ ಪ್ರೀತಿಯ ಉಡುಗೊರೆಗಳನ್ನು ಸ್ವೀಕರಿಸಿ ಫೋಟೋಗಳಿಗೆ ಪೋಸ್ ನೀಡುವ ಮೂಲಕ ಅಭಿಮಾನಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದರು.







