ರಾಫೆಲ್ ಡ್ರಾದಲ್ಲಿ 1 ಮಿಲಿಯನ್ ಡಾಲರ್ ಗೆದ್ದ ಭಾರತೀಯ ಶಿಕ್ಷಕಿ
ಅಜ್ಮಾನ್, ಜುಲೈ 16: ಅಜ್ಮಾನ್ನ ಶಾಲೆಯೊಂದರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಶಿಕ್ಷಕರೊಬ್ಬರು 1 ಮಿಲಿಯನ್ ಡಾಲರ್ ಮೊತ್ತವನ್ನು ರಾಫೆಲ್ ಡ್ರಾದಲ್ಲಿ ಗೆಲ್ಲುವ ಮೂಲಕ ಜಾಕ್ಪಾಟ್ ಹೊಡೆದಿದ್ದಾರೆ. ಇದು ಭಾರತ ಮೂಲದವರು ಅದೃಷ್ಟ ಡ್ರಾ ಗೆದ್ದಿರುವ ಪಟ್ಟಿಗೆ ಇತ್ತೀಚಿನ ಸೇರ್ಪಡೆಯಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ .
ಯುಎಇಯಲ್ಲಿ ದೀರ್ಘಕಾಲ ನೆಲೆಸಿರುವ ಮತ್ತು ಪ್ರಸ್ತುತ ಅಜ್ಮಾನ್ನ ಭಾರತೀಯ ಪ್ರೌಢ ಶಾಲೆಯ ಪ್ರಾಂಶುಪಾಲರಾಗಿರುವ ಮಾಲತಿ ದಾಸ್, ಜೂನ್ 26 ರಂದು ಆನ್ಲೈನ್ನಲ್ಲಿ ತಮ್ಮ ರಾಫೆಲ್ ಡ್ರಾ ಟಿಕೆಟ್ ಖರೀದಿಸಿದ್ದರು ಎಂದು ಮಾಧ್ಯಮ ಬುಧವಾರ ವರದಿ ಮಾಡಿದೆ.
ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಡ್ರಾ ನಡೆದ ನಂತರ ಜುಲೈ 15 ರಂದು ದಾಸ್ 1 ಮಿಲಿಯನ್ ಡಾಲರ್ ಮೊತ್ತವನ್ನು ಗೆದ್ದರು.
ದಾಸ್ ಈ ಬಗ್ಗೆ ಮಾತನಾಡಿ ಗೆಲುವಿಗೆ ನಾನು ಆಭಾರಿಯಾಗಿದ್ದೇನೆ. ಪ್ರಸ್ತುತ ಕಾಲದಲ್ಲಿ, ಇದು ಒಂದು ದೊಡ್ಡ ಆಶೀರ್ವಾದ. ಈ ಹಣವನ್ನು ಉತ್ತಮ ಕಾರ್ಯಕ್ಕೆ ಬಳಸಲು ಬಯಸುತ್ತೇನೆ ಎಂದು ದಾಸ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪ್ರಸ್ತುತ ಪ್ರಾಂಶುಪಾಲರಾಗಿರುವ ಅಜ್ಮಾನ್ ಶಾಲೆಗೆ ಸ್ವಲ್ಪ ಹಣವನ್ನು ಮೀಸಲಿಡಲು ಬಯಸುತ್ತೇನೆ ಎಂದು ದಾಸ್ ಹೇಳಿದ್ದಾರೆ. ಸಂಘಟಕರ ಪ್ರಕಾರ, ದಾಸ್ ಮಿಲಿಯನ್ ಡಾಲರ್ ಗೆದ್ದ 165 ನೇ ಭಾರತೀಯ ಮೂಲದವರು.
ದಾಸ್ ಗೆ ಮುಂಚಿತವಾಗಿ, ಯುಎಇಯ ಭಾರತೀಯ ಡಿಕ್ಸನ್ ಕಟ್ಟಿತಾರಾ ಅಬ್ರಹಾಂ ಕಳೆದ ತಿಂಗಳು 10 ಮಿಲಿಯನ್ ದಿರ್ಹಾಮ್ ಅನ್ನು ರಾಫೆಲ್ ಡ್ರಾದಲ್ಲಿ ಗೆದ್ದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಏಪ್ರಿಲ್ ನಲ್ಲಿ, ದುಬೈನ ಭಾರತೀಯ ಚಾಲಕ ಅಬುಧಾಬಿಯಲ್ಲಿ ನಡೆದ ರಾಫೆಲ್ ಡ್ರಾದಲ್ಲಿ 12 ಮಿಲಿಯನ್ ದಿರ್ಹಾಮ್ ಗೆದ್ದಿದ್ದರು.
ಜನವರಿಯಲ್ಲಿ, ಭಾರತೀಯರೊಬ್ಬರು ಅಬುಧಾಬಿಯಲ್ಲಿ ಇದುವರೆಗೆ ನಡೆದ ಅತಿ ದೊಡ್ಡ ಮೊತ್ತ 12 ಮಿಲಿಯನ್ ದಿರ್ಹಾಮ್ ಬಹುಮಾನದ ಮೊತ್ತ ಗೆದ್ದಿದ್ದರು. ಇದಲ್ಲದೆ, ಕಳೆದ ವರ್ಷ ಅಕ್ಟೋಬರ್ನಲ್ಲಿ ಅಬುಧಾಬಿಯಲ್ಲಿ ನಡೆದ ಮೆಗಾ ರಾಫೆಲ್ ಡ್ರಾದಲ್ಲಿ ತಲಾ 1 ಮಿಲಿಯನ್ ದಿರ್ಹಾಮ್ ಗೆದ್ದ 10 ಜನರಲ್ಲಿ ಎಂಟು ಭಾರತೀಯರು ಸೇರಿದ್ದಾರೆ.